ಧಾರವಾಡ:
ಬೆಳಗ್ಗೆ 5.45ರಿಂದ 8.30ರ ವರೆಗೆ ನಡೆದ ಹಕ್ಕಿಗಳ ವೀಕ್ಷಣೆಯಲ್ಲಿ ನೇಚರ್ ರಿಸರ್ಚ್ ಸೆಂಟರ್, ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ ಹಾಗೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ 38 ಜನ ಪರಿಸರಾಸಕ್ತರ ತಂಡವು ಪಕ್ಷಿ ಶಾಸ್ತ್ರಜ್ಞರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಯಿತು. 48 ಪ್ರಜಾತಿಗೆ ಸೇರಿದ 156 ಪಕ್ಷಿಗಳನ್ನು ವೀಕ್ಷಿಸಿ, ದಾಖಲಿಸಿದರು.
ಸೈಬೀರಿಯನ್ ಸ್ಟೋನ್ ಚಾಟ್, ವೈಟ್ ಬ್ರೋವ್ಡ್ ಬುಲ್‌ಬುಲ್, ಲಾಂಗ್ ಟೇಲ್ಡ್ ಶ್ರೇಕ್ ಹಾಗೂ ಬ್ರೌನ್ ಶ್ರೇಕ್, ಇಂಡಿಯನ್ ಗ್ರೇ ಹಾರ್ನ್ಬಿಲ್, ಬ್ಲ್ಯಾಕ್ ಹೆಡೆಡ್ ಇಬಿಸ್, ಲಿಟಲ್ ರಿಂಗ್ಡ್ ಪ್ಲೋವರ್, ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್, ಲಿಟಲ್ ಸ್ವಿಫ್ಟ್ ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್, ಬಾರ್ನ್ ಸ್ವಾಲ್ಲೋ ಮುಂತಾದ ಪಕ್ಷಿಗಳನ್ನು,ಇ-ಬರ್ಡ್‌ನಲ್ಲಿ ದಾಖಲಿಸಲಾಯಿತು. ಪರಿಸರವಾದಿ ಪಂಚಾಕ್ಷರಿ ಹಿರೇಮಠ, ಸಾವಯವ ಕೃಷಿ ತಜ್ಞ ಕೃಷ್ಣಕುಮಾರ ಭಾಗವತ, ಪ್ರಾಣಿ ಶಾಸ್ತ್ರಜ್ಞ ಡಾ. ಧೀರಜ ವೀರನಗೌಡರ, ಪರಿಸರಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ, ಪಕ್ಷಿಮಿತ್ರ ಶ್ರೀಕಾಂತ ಜೋಶಿ ಹಾಗೂ ಹರ್ಷವರ್ಧನ ಶೀಲವಂತ ತಂಡಗಳನ್ನು ಮುನ್ನಡೆಸಿದರು. ಕವಿವಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧಕರು, ಪಿಎಚ್‌ಡಿ ವಿದ್ಯಾರ್ಥಿಗಳು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು, ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳು, ಪರಿಸರಾಸಕ್ತರು ಪಾಲ್ಗೊಂಡಿದ್ದರು. ಪಕ್ಷಿ ವೀಕ್ಷಣೆ ಶಿಬಿರಗಳಿಂದ ಪಕ್ಷಿಗಳ ಬಗ್ಗೆ, ಅವುಗಳ ಕಥೆ-ವ್ಯಥೆ ಕುರಿತು ತಿಳಿದು, ಅವುಗಳ ಸಂರಕ್ಷಣೆಗೆ ನಾವು, ನಮ್ಮ ವೈಯಕ್ತಿಕ ಶಕ್ತ್ಯಾನುಸಾರ ಮನೆ-ಮಟ್ಟದಲ್ಲಿ, ಏನು ಮಾಡಬಹುದು ಎಂದು ಯೋಚಿಸಲು, ಯೋಜಿಸಲು ಸಹಕಾರಿಯಾಗುತ್ತದೆ ಎಂದು ಪಕ್ಷಿ ವೀಕ್ಷಕಿ ಡಾ. ರೂಪಾ ಜೋಶಿ ಹೇಳಿದರು.ನಿರಂತರ ಪಕ್ಷಿಗಳ ಅಧ್ಯಯನ, ನಮ್ಮ ಮನೋ ಆರೋಗ್ಯವನ್ನು ಸುದೃಢವಾಗಿರಿಸಬಹುದು. ಹವ್ಯಾಸವಾಗಿ ಆರಂಭಿಸಿ, ಗಂಭೀರವಾಗಿ ಅವುಗಳ ಬಗ್ಗೆ ಅಧ್ಯಯನ ನಡೆಸುವ ವರೆಗೆ ನಾನು ನಡೆದು ಬಂದ ಹಾದಿ, ಇಂತಹ ಸಕಾಲಿಕ ಶಿಬಿರಗಳಲ್ಲಿ ಪಾಲ್ಗೊಂಡಿದ್ದರ ಪರಿಣಾಮ ಎನ್ನಬಹುದು ಎಂದು ಡಾ. ಶಿಲ್ಪಾ ವೆರ್ಣೇಕರ ತಿಳಿಸಿದರು.