ಡಾ. ರಾಜಶೇಖರ ನೀರಮಾನ್ವಿ ನೆನಪು-ಕಥೆಗಳ ಕುರಿತು ಸಂವಾದ ಕಾರ್ಯಕ್ರಮ
ಕನ್ನಡ ಸಾಹಿತ್ಯ ಪ್ರಪಂಚ ಅತ್ಯಂತ ಸಮೃದ್ಧವಾಗಿದ್ದು, ಕನ್ನಡ ಸಾಹಿತ್ಯದ ಮೂಲಕ ವಿಶ್ವದ ಸಾಹಿತ್ಯವನ್ನು ಅರಿಯಲು ಸಾಧ್ಯವಿದೆ. ಆ ಮಟ್ಟಿಗಿನ ಗಟ್ಟಿ ಸಾಹಿತ್ಯ ಕನ್ನಡದಲ್ಲಿದೆ. ಇದಕ್ಕೆ ಡಾ. ರಾಜಶೇಖರ ನೀರಮಾನ್ವಿಯವರ ಕಥೆಗಳೇ ಸಾಕ್ಷಿ ಎಂದು ಹಿರಿಯ ಕವಯತ್ರಿ ಸವಿತಾ ನಾಗಭೂಷಣ ತಿಳಿಸಿದರು.
ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಹಾಗೂ ಬಳ್ಳಾರಿಯ ಲೋಹಿಯಾ ಪ್ರಕಾಶನ ಸಹಯೋಗದಲ್ಲಿ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯ ಬಿಪಿಎಸ್ಸಿ ಶಾಲೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಕಥೆಗಾರ ಡಾ. ರಾಜಶೇಖರ ನೀರಮಾನ್ವಿ ನೆನಪು, ಕಥೆಗಳ ಕುರಿತ ಮಾತುಕತೆ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದು ಕನ್ನಡದ ಕಥಾ ಲೋಕದ ಬಗ್ಗೆ ಮಾತನಾಡುವಾಗ ನೀರಮಾನ್ವಿಯವರ ಕಥೆಗಳನ್ನು ಬಿಟ್ಟು ಚರ್ಚಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಕಥೆಗಳು ಕನ್ನಡದ ಕಥಾಲೋಕದಲ್ಲಿ ಛಾಪು ಮೂಡಿಸಿವೆ ಎಂದು ಹೇಳಿದರು.
ನೀರಮಾನ್ವಿಯವರ ಕಥಾ ಸ್ವರೂಪ ಕುರಿತು ವಿವರಿಸಿದ ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ,
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್. ಸುಜಾತಾ ನೀರಮಾನ್ವಿಯವರ ಕಥೆಗಳ ವೈಶಿಷ್ಟ್ಯತೆ ಕುರಿತು ಪ್ರಾಸ್ತಾಪಿಸಿದರಲ್ಲದೆ, ನೀರಮಾನ್ವಿಯವರ ಕಥೆಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮಧ್ಯಾಹ್ನದ ಮಾತುಕತೆಯಲ್ಲಿ ಹಿರಿಯ ಲೇಖಕ ಡಾ. ಅಮರೇಶ ನುಗಡೋಣಿ ಹಾಗೂ ರಾಯಚೂರಿನ ಲೇಖಕ ಡಾ. ಚಿದಾನಂದ ಸಾಲಿ ಮಾತನಾಡಿದರಲ್ಲದೆ, ಬಳಿಕ ಯುವ ಕಥೆಗಾರರ ಜತೆ ಸಂವಾದ ನಡೆಸಿದರು. ಸಂಜೆ ಜರುಗಿದ ಸಮಾರೋಪದಲ್ಲಿ ಸಮಾಜಮುಖಿ ಪತ್ರಿಕೆ ಸಂಪಾದಕ ಚಂದ್ರಕಾಂತ ವಡ್ಡು ನೀರಮಾನ್ವಿಯವರ ಬರವಣಿಗೆಯ ಗಟ್ಟಿತನ ಕುರಿತು ಪ್ರಸ್ತಾಪಿಸಿದರಲ್ಲದೆ, ನೀರಮಾನ್ವಿಯವರ ಕಥೆಗಳನ್ನು ಗುರುತಿಸುವಿಕೆ ಕೆಲಸವಾಗಿದೆ. ಆದರೆ, ಮತ್ತಷ್ಟೂ ಅವರ ಕೃತಿಗಳ ವಿಮರ್ಶೆ, ಸಂವಾದ ನಡೆಯುವಂತಾಗಬೇಕು ಎಂದು ಆಶಿಸಿದರು.
ನಾಗರಾಜ ಬಸರಕೋಡು ಕಾರ್ಯಕ್ರಮ ನಿರ್ವಹಿಸಿದರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇಗೌಡ, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ, ಮಂಡ್ಯ, ಬೆಂಗಳೂರು, ಹಾಸನ ಮತ್ತಿತರ ಜಿಲ್ಲೆಗಳ ಲೇಖಕರು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಾವ ಕಥೆಗೂ ಮಾನದಂಡ ಇರುವುದಿಲ್ಲ. ಅದನ್ನು ಇಟ್ಟುಕೊಂಡು ಬರೆಯುವ ಕಥೆ, ಕಥೆ ಎನಿಸಿಕೊಳ್ಳುವುದಿಲ್ಲ ಎಂದು ಹಿರಿಯ ಲೇಖಕ ಡಾ. ರಾಜೇಂದ್ರ ಚೆನ್ನಿ ತಿಳಿಸಿದರು.
ಸಂವಾದಲ್ಲಿ ಯುವ ಲೇಖಕರ ಪ್ರಶ್ನೆಗೆ ಉತ್ತರಿಸಿದ ಅವರು, ಅನುಭವವನ್ನೇ ಇಟ್ಟುಕೊಂಡು ಕಥೆ ಬರೆಯಬೇಕು. ಬೇರೆಯವರು ಬರೆದಂತೆ ನಾನು ಬರೆಯುತ್ತೇನೆ ಎಂದು ಹೊರಡಬಾರದು. ಅನುಭವದ ಮೂಲಕ ಕಥೆ ಹುಟ್ಟಬೇಕು ಎಂದು ಹೇಳಿದರು.