ಗ್ರಾಮದೇವತೆಗೆ ಭಕ್ತಿಯಿಂದ ಬೇಡಿಕೊಂಡಾಗ ಇಷ್ಟಾರ್ಥ ಈಡೇರುತ್ತವೆ-ಮಂಜುನಾಥ

ಗ್ರಾಮಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಮಳೆ, ಬೆಳೆ ಸರಿಯಾಗಿ ಆಗಲಿ. ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲಿ. ಜನ ಗ್ರಾಮದೇವತೆ ಭಕ್ತಿಯಿಂದ ಬೇಡಿಕೊಂಡಾಗ ದೈವಶಕ್ತಿಯ ಆಧಾರದ ಮೇಲೆ ಭಕ್ತರ ಇಷ್ಟಾರ್ಥ ಈಡೇರುತ್ತವೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

KannadaprabhaNewsNetwork | Published : Apr 26, 2024 7:52 PM IST / Updated: Apr 27 2024, 01:23 AM IST

ಶಿಗ್ಗಾಂವಿ: ಗ್ರಾಮಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಮಳೆ, ಬೆಳೆ ಸರಿಯಾಗಿ ಆಗಲಿ. ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲಿ. ಜನ ಗ್ರಾಮದೇವತೆ ಭಕ್ತಿಯಿಂದ ಬೇಡಿಕೊಂಡಾಗ ದೈವಶಕ್ತಿಯ ಆಧಾರದ ಮೇಲೆ ಭಕ್ತರ ಇಷ್ಟಾರ್ಥ ಈಡೇರುತ್ತವೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ರಾಮದೇವಿ ನೂತನ ದೇವಸ್ಥಾನ ಕಳಸಾರೋಹಣ, ನೂತನ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪಣೆ ಮತ್ತು ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ವರುಣಗೌಡ ಪಾಟೀಲ ಮಾತನಾಡಿ, ಊರಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಸದಾ ಗ್ರಾಮದ ಬೆನ್ನೆಲುಬಾಗಿ ನಾವು ಸೇವೆ ಮಾಡುತ್ತೇವೆ ಎಂದರು.

ಹಲವು ವರ್ಷಗಳ ಆನಂತರ ಈ ಗ್ರಾಮದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮವನ್ನು ಎಲ್ಲರೂ ಒಟ್ಟಾಗಿ ಸೇರಿ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಅಲ್ಲದೆ ಗ್ರಾಮದೇವಿ ಪೂಜೆ ಹಾಗೂ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಪ್ರತಿ ತಿಂಗಳು ₹2 ಸಾವಿರ ನೀಡುತ್ತೇನೆ ಎಂದು ಘೋಷಿಸಿದರು.

ಮೆಡಕಾಟ್ ವಿಲ್ಲಾ ಮಾಲೀಕ ಹೇಮಂತ ಮೋದಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೇವಾಲಯಗಳ ಜೀರ್ಣೋದ್ಧಾರ ಆಗಬೇಕಾದರೆ ದೈವಬಲ ದೊಡ್ಡದು. ಪೂಜಾ ಕೈಂಕರ್ಯ ಮಾಡಿದಾಗ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಕಾರಣವಾಗುತ್ತದೆ ಎಂದರು.

ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲರೂ ಒಟ್ಟುಗೂಡಿ, ಉಣ್ಣುವುದು, ಪರಸ್ಪರ ಯೋಗಕ್ಷೇಮ ವಿಚಾರ ವಿನಿಮಯ ಮಾಡುವುದು, ಸಂತೋಷದಿಂದ ಆಚರಣೆ ಮಾಡುವುದೇ ಜಾತ್ರೆಯಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜಾತ್ರೆಗಳು ಹದಗೆಟ್ಟಿವೆ. ಹಿಂದಿನ ಪ್ರೀತಿ, ವಿಶ್ವಾಸ ಈಗಿಲ್ಲ ಎಂದರು.

ಗ್ರಾಮದ ಮುಖಂಡ ಪರಶುರಾಮ ಕಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೪ ವರ್ಷಗಳಿಂದ ದೇವಿಯ ಜಾತ್ರೆ ಮಾಡಬೇಕು, ದೇವಸ್ಥಾನ ಕಟ್ಟಬೇಕು, ದೇವಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಕನಸು ಈಗ ಪೂರ್ಣಗೊಂಡಿದೆ. ಇದಕ್ಕೆ ನಮ್ಮೂರ ಯುವಕರ ಪಾತ್ರ ದೊಡ್ಡದಿದೆ. ದಾನಿಗಳು ನೀಡಿರುವ ಸಹಕಾರದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ ಎಂದರು.

ತಾಪಂ ಮಾಜಿ ಸದಸ್ಯ ಈಶ್ವರಗೌಡ ಪಾಟೀಲ, ಹಿರಿಯ ಪತ್ರಕರ್ತ ಬಿ.ಎಸ್. ಹಿರೇಮಠ, ಮಡ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿದರು.

ಕರ್ನಾಟಕ ಜಾನಪದ ವಿವಿ ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕಾಳಿ ಸ್ವಾಗತಿಸಿದರು. ಗ್ರಾಪಂ ಉಪಾಧ್ಯಕ್ಷ ಲಕ್ಷ್ಮವ್ವ ನಡಗೇರಿ, ಸದಸ್ಯರಾದ ಬಸನಗೌಡ ಪಾಟೀಲ, ಯಲ್ಲಪ್ಪ ತಗಡಿನಮನಿ, ಚಂದ್ರಣ್ಣ ನಡುವಿನಮನಿ, ಜಿನ್ನಪ್ಪ ವರೂರ, ರುದ್ರಪ್ಪ ಕಾಳಿ, ಶಿವಪ್ಪ ಈಟಿ, ತಾರಕೇಶ ಮಠದ, ಧರ್ಮಣ್ಣ ಕಿವಡನವರ, ಮಲ್ಲಿಕಾರ್ಜುನ ಅಗಸರ, ಶಿವಾನಂದ ದೊಡ್ಡಮನಿ, ನಾಗರಾಜ ಕ್ಯಾಬಳ್ಳಿ ಹಾಗೂ ಗ್ರಾಮದೇವಿ ಸೇವಾ ಸಮಿತಿಯ ಸದಸ್ಯರು ಹಾಜರಿದ್ದರು.

Share this article