ಒಳ ಮೀಸಲು ಹೋರಾಟದ ಎಫ್ಐಆರ್ ವಾಪಸ್ಸು ಪಡೆಯಿರಿ: ವಕೀಲ ಕುಂಬಯ್ಯ

KannadaprabhaNewsNetwork |  
Published : Aug 04, 2024, 01:17 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ   | Kannada Prabha

ಸಾರಾಂಶ

ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕರ್ನಾಟಕದಲ್ಲಿ ಶೀಘ್ರ ಅನುಷ್ಠಾನಕ್ಕೆ ತರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಗತಿ ಗಂಭೀರವಾಗಿ ಪರಿಗಣಿಸಬೇಕೆಂದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟರ ಒಳಮೀಸಲು ಸಂಬಂಧಿಸಿದಂತೆ ಕಳೆದ ಮೂವತ್ತು ವರ್ಷಗಳಿಂದ ನಡೆದ ಹೋರಾಟಕ್ಕೆ ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಎಫ್ಐಆರ್ ಗಳಾಗಿವೆ. ರಾಜ್ಯ ಸರ್ಕಾರ ಎಲ್ಲ ಪ್ರಕರಣಗಳ ಹಿಂದಕ್ಕೆ ಪಡೆಯಬೇಕು. ಅನುಸೂಚಿತ ಆಯೋಗಕ್ಕೆ ಸರ್ಕಾರ ದಲಿತರನ್ನು ನೇಮಕ ಮಾಡಬೇಕೆಂದು ಹೈಕೋರ್ಟ್ ಹಿರಿಯ ವಕೀಲ ಕುಂಬಯ್ಯ ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟರಿಗೆ ಒಳ ಮೀಸಲಾತಿ ನೀಡುವ ಸಂಬಂಧ ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕರ್ನಾಟಕದಲ್ಲಿ ಶೀಘ್ರ ಅನುಷ್ಠಾನಕ್ಕೆ ತರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಗತಿ ಗಂಭೀರವಾಗಿ ಪರಿಗಣಿಸಬೇಕೆಂದರು.

ಆಂಧ್ರದಲ್ಲಿ ಮಂದಕೃಷ್ಣ ಮಾದಿಗರವರು ಒಳ ಮೀಸಲಾತಿ ಜಾರಿಗಾಗಿ ಸುಪ್ರೀಂ ಕೋರ್ಟ್‍ನಲ್ಲಿ ಕೇಸ್‌ ಹಾಕಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಅದೇ ರೀತಿ ಕರ್ನಾಟಕ, ತಮಿಳುನಾಡು, ಪಂಜಾಬ್ ಸೇರಿ ನಾನಾ ರಾಜ್ಯಗಳಲ್ಲಿ ನಡೆದ ಹೋರಾಟಕ್ಕೆ ಸುಪ್ರೀಂ ಕೋರ್ಟ್‍ನ ಮಹತ್ವದ ತೀರ್ಪು ಫಲ ನೀಡಿದೆ. ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ರಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮಾತನಾಡಿ, ಒಳಮೀಸಲಾತಿಗಾಗಿ 1996ರಲ್ಲಿ ಹೊಲೆಮಾದಿಗರ ಮೀಸಲಾತಿ ಹೋರಾಟ ಸಮಿತಿ ಆರಂಭಗೊಂಡಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸೇರಿ ಅನೇಕ ಸಂಘಟನೆಗಳು ಒಳ ಮೀಸಲಾತಿಗಾಗಿ ಅನೇಕ ಹೋರಾಟ, ಪಾದಯಾತ್ರೆ, ಧರಣಿ, ಶಾಸಕರುಗಳ ನಿವಾಸದ ಎದುರು ಪ್ರತಿಭಟನೆ, ಜಾಥಾ ನಡೆಸಿದ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದರಿಂದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿಳಂಬ ಮಾಡದೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.

ಒಳಮೀಸಲಾತಿಯಿಂದ ನಮಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರಕುತ್ತದೆಯೇ ವಿನಃ ರಾಜಕೀಯವಾಗಿ ಅಲ್ಲ. ಹಾಗಾಗಿ ದಲಿತರು ರಾಜಕೀಯವಾಗಿ ಅಧಿಕಾರದಲ್ಲಿದ್ದರೆ ಅಭಿವೃದ್ದಿಯಾಗಲು ಸಾಧ್ಯ. ಹಾಗಾಗಿ ರಾಜಕೀಯವಾಗಿಯೂ ಮೀಸಲಾತಿ ಬೇಕೆಂದು ಕೋರಿದರು. ವಕೀಲ ಜಿ.ಕೆ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಒಳ ಮೀಸಲಾತಿಯನ್ನು ಆಯಾ ರಾಜ್ಯ ಸರ್ಕಾರಗಳೇ ನೀಡಬಹುದೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಅನುಷ್ಟಾನಕ್ಕೆ ತರಬೇಕು ಎಂದರು.

ನ್ಯಾಯವಾದಿಗಳಾದ ವೆಂಕಟೇಶ್, ಮುನಿಯಪ್ಪ, ತುಳಸಿರಾಮ, ಎಂ.ಕೆ.ಲೋಕೇಶ್, ಹನುಮಂತಪ್ಪ, ಶಿವಣ್ಣ, ಸುರೇಶ್, ಎಸ್.ಮಲ್ಲಿಕಾರ್ಜುನ, ಗಿರೀಶ್, ಸಿ.ಬಾಬು, ಆರ್.ಟಿ.ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ