ಬಳ್ಳಾರಿ: ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರ ಖಂಡಿಸಿ ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಪೋಷಕರು ನಗರದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರಿ ಶಾಲೆ ಉಳಿಸಿಕೊಳ್ಳುವಂತೆ ಆಗ್ರಹಿಸಿದರು.
ಗಾಂಧಿಭವನದಲ್ಲಿ ಜರುಗಿದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಎಐಡಿಎಸ್‌ಒ ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ಯೋಜನೆಯನ್ನು ಈ ಕೂಡಲೇ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಮಾಜಿ ರಾಜ್ಯ ಕಾರ್ಯದರ್ಶಿ ಡಾ. ಗೋವರ್ಧನ್ ರೆಡ್ಡಿ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲಿ ಸರ್ಕಾರಿ ಶಾಲೆ ಇರಬೇಕು. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಸಾಕಷ್ಟು ಸಮಸ್ಯೆಗಳಿವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಸಮಸ್ಯೆ ಸರಿಪಡಿಸುವ ಬದಲಾಗಿ ಪರ್ಯಾಯ ವ್ಯವಸ್ಥೆಯೇ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಎಂದು ಸರ್ಕಾರ ಹೇಳುತ್ತಿದೆ ಎಂದು ಟೀಕಿಸಿದರು.ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಅಪೂರ್ವ ಸಿ.ಎಂ., ನಿವೃತ್ತ ಶಿಕ್ಷಕ ಉಪ್ಪಾರ್ ನರಸಣ್ಣ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನಾಯಕ ಕೆ. ಸೋಮಶೇಖರಗೌಡ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‌ಒ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ವಹಿಸಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಈರಣ್ಣ ಪ್ರಾಸ್ತಾವಿಕ ಮಾತನಾಡಿದರು.
ಬಳ್ಳಾರಿ ಸರ್ಕಾರಿ ಶಾಲೆಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಪೋಷಕರ ಸಮಿತಿಯ ಸುಂಕಪ್ಪ, ಬಸವರಾಜ್, ನಾಗರಾಜ, ಪಾರ್ವತಿ, ಹನುಮಂತಮ್ಮ, ಕುಮಾರಪ್ಪ, ಗಾದಲಿಂಗ, ಚಂದ್ರಶೇಖರ್, ನೀಲಮ್ಮ, ರಾಮು, ಗಾಳೆಪ್ಪ, ಖಂಡೆಪ್ಪ, ನಾಗಮ್ಮ, ರುದ್ರಮ್ಮ, ವಸಂತ್, ಒಳಗೊಂಡಂತೆ ಬಿಸಲಹಳ್ಳಿ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ತೆಗ್ಗಿನಬೂದಿಹಾಳ್, ಅಸುಂಡಿ ಸೇರಿದಂತೆ ತಾಲೂಕಿನ ಎತ್ತಿನಬೂದಿಹಾಳ್, ಯಾಳ್ಪಿ, ಬಿ. ಗೋನಾಳ್, ಕೊರ್ಲಗುಂದಿ, ಗುಡಾರ್ ನಗರ, ಹಾಗಲೂರು, ಬಿ. ಗೋನಾಳು ಸೇರಿದಂತೆ ವಿವಿಧ ಗ್ರಾಮಗಳ ಪಾಲಕರು ಹಾಗೂ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಪೋಷಕರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.