ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ. 80 ರಷ್ಟು ಮತದಾನ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ. 80 ರಷ್ಟು ಮತದಾನವಾಗಿದೆ.

KannadaprabhaNewsNetwork | Published : Apr 27, 2024 7:59 PM IST / Updated: Apr 28 2024, 09:40 AM IST

  ಕೆ.ಆರ್.ನಗರ :  ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ. 80 ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ರಿಂದ ಆರಂಭವಾದ ಮತದಾನ ಮಂದಗತಿಯಲ್ಲಿ ಸಾಗಿತ್ತಾದರೂ ಮಧ್ಯಾಹ್ನದ ನಂತರ ಮತದಾರರು ಮತಗಟ್ಟೆಯತ್ತ ಅತ್ಯಂತ ಹರ್ಷದಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು.

ಶಾಸಕ ಡಿ. ರವಿಶಂಕರ್ ಕೆಸ್ತೂರುಕೊಪ್ಪಲು ಗ್ರಾಮದ ಮತ ಗಟ್ಟೆಯಲ್ಲಿ, ಮಾಜಿ ಸಚಿವ ಸಾ.ರಾ. ಮಹೇಶ್ ದಂಪತಿ ಸಾಲಿಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಲ್ಯಾಣಪುರ ಮತಗಟ್ಟೆಯಲ್ಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಸ್ವಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಭೇರ್ಯ, ಬೀಚನಹಳ್ಳಿಕೊಪ್ಪಲು, ತಿಪ್ಪೂರು, ಹೆಬ್ಬಾಳು, ಮಾರಗೌಡನಹಳ್ಳಿ ಮತಗಟ್ಟೆಯಲ್ಲಿ ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಮತಯಂತ್ರಗಳನ್ನು ಬದಲಾಯಿಸಿ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಂಡು ನಿರಾತಂಕವಾಗಿ ಮತ ಚಲಾವಣೆಯಾಗುವಂತೆ ಕ್ರಮ ಕೈಗೊಳ್ಳಲಾಯಿತು.

ಶಾಸಕ ಡಿ. ರವಿಶಂಕರ್ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್ ಬೆಳಗ್ಗೆಯಿಂದ ಸಂಜೆಯವರೆಗೆ ಕ್ಷೇತ್ರದ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ತೆರಳಿ ತಮ್ಮ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಅವರನ್ನು ಹುರಿದುಂಬಿಸಿದರಲ್ಲದೆ ಅಂತಿಮ ಕ್ಷಣದಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದರು.

ಬಿರು ಬಿಸಿಲಿನ ಅಡ್ಡಿ: ಮತದಾನ ಮಾಡಲು ಬಂದವರಿಗೆ ಬೆಳಗ್ಗೆ 10ರ ನಂತರ ಬಿರು ಬಿಸಿಲು ಅಡ್ಡಿ ಪಡಿಸಿದ್ದರಿಂದ ಸಂಜೆ 4 ಗಂಟೆಯ ನಂತರ ಬಹುತೇಕ ಮತದಾರರು ಮತಗಟ್ಟೆಯತ್ತ ಬಂದು ತಮ್ಮ ಹಕ್ಕು ಚಲಾಯಿಸಿದರು. ಸಂಜೆ 7 ಗಂಟೆಯವರೆಗೂ ಕೆಲವು ಮತಗಟ್ಟೆಗಳಲ್ಲಿ ಮತದಾನ ಮುಂದುವರೆದಿತ್ತು. 6 ಗಂಟೆಯೊಳಗೆ ಮತಕೇಂದ್ರದ ಒಳಗೆ ಆಗಮಿಸಿದ ಮತದಾರರಿಗೆ ಸರಾಗವಾಗಿ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆ ಸಿಬ್ಬಂದಿ ಅನುಕೂಲ ಮಾಡಿಕೊಟ್ಟರು.

ಮತದಾನ ಪ್ರಮಾಣ ಹೆಚ್ಚಳ ಸಾಧ್ಯತೆ:

ಸಂಜೆ 6ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ. 80ರಷ್ಟು ಮತದಾನ ನಡೆದಿತ್ತಾದರೂ ಕೆಲವು ಮತಗಟ್ಟೆಗಳಲ್ಲಿ 7 ಗಂಟೆಯಾದರೂ ಮತದಾನ ಸಾಗಿದ್ದರಿಂದ ಸರಾಸರಿ ಮತದಾನದಲ್ಲಿ ಒಂದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Share this article