ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಮಳೆಗಾಲ ಪ್ರಾರಂಭವಾದರೂ ಇಲ್ಲಿನ ಬೆಳಕೋಡು-ಕರಡಿಗ ಗ್ರಾಮ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು. ಪ್ರತಿನಿತ್ಯ ಈ ಸಂಪರ್ಕದ ಸಾರವೇ ಮೂಲಕವೇ ಶಾಲೆ -ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಮಹಿಳೆಯರ, ವೃದ್ಧರು ಹೀಗೆ ಕೃಷಿಕರು ಮತ್ತು ಸಾರ್ವಜನಿಕರು ಕಾಲಸಂಕದ ಮೇಲೆ ಸರ್ಕಸ್ ಮಾಡಿಕೊಂಡು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿ ಬಳಸಿ ದೂರದ ಪ್ರಯಾಣದಿಂದ ರಿಪ್ಪನ್‌ಪೇಟೆ ಸೇರಬೇಕಿದೆ. ನೇರ ಸಂಪರ್ಕದ ದಾರಿ ನೀರಿನಿಂದ ಮುಳುಗಡೆಗೊಂಡು ಸಂಚಾರ ಅಸ್ತವ್ಯಸ್ತವಾಗುವುದರಿಂದ ಇಲ್ಲಿನ ಜನರು ಪೇಟೆ ಪಟ್ಟಣ ಸನಿಹ ಸಂಚಾರಕ್ಕಾಗಿ ಶರ್ಮಿನಾವತಿ ಹಳ್ಳದ ಎರಡು ಕಡೆಯ ದಂಡೆಗೆ ಮರದ ಉದ್ದದ ಮರದ ದಿಮ್ಮಿಗಳ ಅಡ್ಡಲಾಗಿ ಹಾಕಿ ಅದರ ಮೇಲೆ ಸರ್ಕಸ್ ಮಾಡಿಕೊಂಡು ಜೀವಭಯದಲ್ಲಿ ಕಾಲುಸಂಕ ನಿರ್ಮಿಸಿಕೊಂಡು ದಾಟುವಂತಾಗಿದೆ. ಆದರೆ, ಸಂಕ ದಾಟುವಾಗ ಸ್ವಲ್ಪ ಯಾಮಾರಿದರೂ ಯಮನ ಪಾದ ಎನ್ನುವ ಸನ್ನಿವೇಶವಿದೆ. ಆದರೂ ಅನಿವಾರ್ಯದ ಬಳಕೆ ಇದಾಗಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಗೋಳು ಕೇಳೋರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಸುತ್ತಿ ಬಳಸಿ ಬರಬೇಕು:ಈ ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಸುಮಾರು ನೂರಕ್ಕೂ ಅಧಿಕ ಕುಟುಂಬಗಳಿರುವ ಇಲ್ಲಿನ ಜನ ಶಾಲೆ, ಆಸ್ಪತ್ರೆ, ಸಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ರಿಪ್ಪನ್‍ಪೇಟೆಗೆ ಬರಬೇಕು. ಗ್ರಾಮಗಳ ಸಮೀಪದ ಮಾರ್ಗ ಅಸುರಕ್ಷಿತ ಕಾಲಸಂಕ ಬಳಸಬೇಕಿದೆ.
10 ವರ್ಷದಿಂದ ಚಿಕ್ಕಜೇನಿ ಬಳಿಯ ಮರದದಿಮ್ಮಿಯ ಕಾಲಸಂಕ ದಾಟುವಾಗ ಎರಡು ಮಕ್ಕಳು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕ್ಷೇತ್ರ ಶಾಸಕರು, ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಈ ಕಡೆ ಗಮನಹರಿಸಿ ಜಂಬಳ್ಳಿ ಯಡಗುಡ್ಡೆ ಸಂಪಳ್ಳಿ ಕಾರಗೋಡು ಬೇಲಕೋಡು ಕರಡಿಗ ಗ್ರಾಮಗಳ ರೈತರು, ನಾಗರಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು.