ಸಮೃದ್ಧ ಹುಲ್ಲುಗಾವಲು ನಾಶದಿಂದ ತೋಳಗಳ ಸಂತತಿ ಕಣ್ಮರೆ : ಅರಣ್ಯಾಧಿಕಾರಿ ರಾಜೇಶ್ವರಿ

KannadaprabhaNewsNetwork |  
Published : Mar 06, 2025, 12:35 AM ISTUpdated : Mar 06, 2025, 12:35 PM IST
3ಕೆಎಂಎನ್ ಡಿ19 | Kannada Prabha

ಸಾರಾಂಶ

ಮೇಲುಕೋಟೆಯಲ್ಲಿನ ಸಮೃದ್ಧ ಹುಲ್ಲುಗಾವಲು ನಾಶದಿಂದ ಅಪರೂಪದ ತೋಳಗಳ ಸಂತತಿ ಕಣ್ಮರೆಯಾಗಿದೆ ಎಂದು ವನ್ಯ ಜೀವಿ ವಲಯದ ವಲಯ ಅರಣ್ಯಾಧಿಕಾರಿ ರಾಜೇಶ್ವರಿ ವಿಷಾದಿಸಿದರು.

 ಮೇಲುಕೋಟೆ : ಮೇಲುಕೋಟೆಯಲ್ಲಿನ ಸಮೃದ್ಧ ಹುಲ್ಲುಗಾವಲು ನಾಶದಿಂದ ಅಪರೂಪದ ತೋಳಗಳ ಸಂತತಿ ಕಣ್ಮರೆಯಾಗಿದೆ ಎಂದು ವನ್ಯ ಜೀವಿ ವಲಯದ ವಲಯ ಅರಣ್ಯಾಧಿಕಾರಿ ರಾಜೇಶ್ವರಿ ವಿಷಾದಿಸಿದರು.

ಮೇಲುಕೋಟೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಲಯ ಹಮ್ಮಿಕೊಂಡಿದ್ದ ವಿಶ್ವ ವನ್ಯಜೀವಿ ದಿನವನ್ನು ಉದ್ಘಾಟಿಸಿ ಮಾತನಾಡಿ, ಚೆಲುವನಾರಾಯಣಸ್ವಾಮಿ ಸಾನ್ನಿಧ್ಯವಿರುವ ಮೇಲುಕೋಟೆ ದಟ್ಟ ಕಾಡು ಹೊಂದಿತ್ತು. ದೇಶದ ಯಾವುದೇ ಭಾಗದಲ್ಲೂ ಕಂಡು ಬರದ ವಿಶೇಷ ಪ್ರಭೇದದ ಬೂದು ತೋಳಗಳ ಧಾಮವಾಗಿತ್ತು ಎಂದರು.

ಮೇಲುಕೋಟೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪರಿಸರದಲ್ಲಿ ತೋಳಗಳ ವಾಸಸ್ಥಾನದ ಕುರುಹುಗಳನ್ನು ಇಂದಿಗೂ ಕಾಣಬಹುದು. ನಿರಂತರವಾಗಿ ಹುಲ್ಲುಗಾವಲು ನಾಶದಿಂದ ಬೂದುತೋಳಗಳು ಕಣ್ಮರೆಯಾಗಿವೆ. ಮಾನವನ ಸ್ವಾರ್ಥದಿಂದ ಇಂತಹ ಎಷ್ಟೋ ವನ್ಯಜೀವಿಗಳು ವಿನಾಶದ ಅಂಚನ್ನು ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಪರೂಪದ ಜೀವಿಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಜೊತೆಗೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಕೈ ಜೋಡಿಸಬೇಕು. ಮೇಲುಕೋಟೆ ಪರಿಸರದಲ್ಲಿ ಮಾತ್ರ ಬದುಕಲು ಆಗುವ ಬೂದು ತೋಳಗಳಿಗೆ ಸೂಕ್ತ ವಾತಾವರಣ ಕಲ್ಪಿಸಿದರೆ ಈಗಲೂ ಮತ್ತೆ ತೋಳಧಾಮ ನಿರ್ಮಿಸಲು ಸಾಧ್ಯವಿದೆ. ಮೇಲುಕೋಟೆ ವನ್ಯಜೀವಿಧಾಮ ಹಲವು ಮಹತ್ವದ ಜೀವಿಗಳನ್ನು ಹೊಂದಿದ್ದು, ಅವುಗಳು ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.

ಡೆಪ್ಯುಟಿ ಆರ್.ಎಫ್.ಒ ಮಂಜುನಾಥ್ ಮಾತನಾಡಿ, ಹುಲಿಗಳು ಕಾವೇರಿ ತೀರದ ಕಾಡುಗಳಲ್ಲಿ ವಾಸಿಸಿ ಆಹಾರ ಸರಪಣಿಯ ನಿಯಮದಂತೆ ಜೈವಿಕ ಪರಿಸರವನ್ನು ಸಮತೋಲನದಲ್ಲಿಡುತ್ತಿರುವ ಕಾರಣ ಕಾವೇರಿ ನದಿ ಸುಗಮವಾಗಿ ಹರಿದು ಬೆಂಗಳೂರಿಗೂ ಕುಡಿಯಲು ಕಾವೇರಿ ನೀರು ದೊರೆಯುತ್ತಿದೆ. ಇದು ಅಚ್ಚರಿ ಎನಿಸಿದರೂ ಸತ್ಯ ಸಂಗತಿಯಾಗಿದೆ ಎಂದರು.

ಪ್ರತಿಯೊಂದು ಜೀವಿಗಳು ಆಹಾರ ಸರಪಣಿಗೊಳಪಡುತ್ತವೆ. ಯಾವುದೇ ಒಂದು ಜೀವಿಯ ಸಂತತಿ ನಾಶವಾದರೂ ಇಡೀ ವನ್ಯಜೀವಿ ಸಂಕುಲ ಹಾಗೂ ಅದನ್ನು ಅವಲಂಬಿಸಿದ ಪರಿಸರ ಸಂಕಷ್ಟಕ್ಕೊಳಗಾಗಲಿದೆ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಡೆಪ್ಯೂಟಿ ಆರ್‌ಎಫ್‌ಒ ಪ್ರಮೋದ್, ರೇವಣ್ಣ, ಬೀಟ್ ಫಾರೆಸ್ಟ್ ಆಫೀಸರ್ ಪ್ರಜ್ವಲ್, ಮಂಜೇಶ್, ಕೌಶಿಕ್, ಯೋಗೇಶ್, ಸತ್ಯಭಾಬು, ಸತೀಶ್ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಬಾಲಕರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್, ಯದುಶೈಲಾ ಪ್ರೌಢಶಾಲೆ ಮುಖ್ಯಶಿಕ್ಷಕ ವಸಂತಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸಿದ್ದರು. ವಿಶ್ವವನ್ಯ ಜೀವಿ ದಿನದ ಪ್ರಯುಕ್ತ ಅರಣ್ಯ ಇಲಾಖೆ ನಡೆಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭಕ್ಕೂ ಮುನ್ನ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಅರಣ್ಯಇಲಾಖಾ ಕಚೇರಿಯವರೆಗೆ ಡೊಳ್ಳುಕುಣಿತ ಕಲಾ ತಂಡದೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.

ಕೋತಿಗಳ ಹಾವಳಿಗೆ ಕಡಿವಾಣ:

ಗ್ರಾಪಂನಿಂದ ಕೋತಿಗಳನ್ನು ಹಿಡಿಸಿದರೆ ಸುರಕ್ಷಿತವಾಗಿ ರಾಷ್ಟ್ರೀಯ ಉದ್ಯಾನವನಗಳಲ್ಲಿ ಬಿಡಲು ಇಲಾಖೆ ಸಹಾಯ ಮಾಡುತ್ತದೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ವರಿ ತಿಳಿಸಿದರು. ಮೇಲುಕೋಟೆಯಲ್ಲಿ ಎರಡುಸಾವಿರಕ್ಕೂ ಅಧಿಕ ಕೋತಿಗಳಿವೆ. ಭಕ್ತರು, ನಾಗರಿಕರಿಗೆ ಕಿರುಕುಳ ಕೊಡುತ್ತಿವೆ. ಇಲಾಖೆಯೇ ನೇರವಾಗಿ ಕೋತಿಗಳನ್ನು ಹಿಡಿಸಲು ಅವಕಾಶವಿಲ್ಲ. ಆದರೆ, ಕೋತಿಗಳ ಉಪಟಳ ತಪ್ಪಿಸಲು ಗ್ರಾಪಂ ಕೈಗೊಳ್ಳುವ ಕ್ರಮಕ್ಕೆ ಅಗತ್ಯ ಸಹಕಾರ ನೀಡುತ್ತೇವೆ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ