ಕನ್ನಡಪ್ರಭ ವಾರ್ತೆ ಮೈಸೂರು
ಹೆಬ್ಬಾಳು ಬೈರವೇಶ್ವರನಗರದ ನಿವಾಸಿ ಸತೀಶ್ ಎಂಬವರ ಪತ್ನಿ ರಾಧಾ (34) ಮೃತಪಟ್ಟವರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರು ಕೆ.ಆರ್.ಎಸ್ ರಸ್ತೆಯಲ್ಲಿರುವ ಟ್ರಾಮಾ ಕೇರ್ ಸೆಂಟರ್ ಮುಂಭಾಗದಲ್ಲಿ ಟೀ ಅಂಗಡಿ ನಡೆಸುತ್ತಿದ್ದರು.
ರಾಧಾ ಅವರು ಎಂದಿನಂತೆ ತಮ್ಮ ದ್ವಿಚಕ್ರವಾಹನದಲ್ಲಿ ಭೈರವೇಶ್ವರನಗರದಿಂದ ಕೆ.ಆರ್.ಎಸ್. ರಸ್ತೆಯಲ್ಲಿರುವ ಟೀ ಅಂಗಡಿಗೆ ತೆರಳಿದ್ದಾರೆ. ಟ್ರಾಮಾ ಕೇರ್ ಸೆಂಟರ್ ಬಳಿ ತಿರುವು ಪಡೆಯುತ್ತಿದ್ದಾಗ ಒಂಟಿಕೊಪ್ಪಲು ಕಡೆಯಿಂದ ಬಂದ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ, ರಾಧಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಮೃತರ ಪತಿ ಸತೀಶ್ ನೀಡಿದ ದೂರಿನ ಮೇರೆಗೆ ವಿವಿ ಪುರಂ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರು ಮತ್ತು ಕಾರು ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.