ರೋಣ ತಾಲೂಕಿನ ಜಕ್ಕಲಿ ಗ್ರಾಮದ ಪಂಚಾಯತ್‌ ಕಸ ಸಂಗ್ರಹಣಾ ವಾಹನಕ್ಕೆ ಮಹಿಳೆ ಡ್ರೈವರ್

KannadaprabhaNewsNetwork |  
Published : Apr 20, 2025, 02:03 AM ISTUpdated : Apr 20, 2025, 01:14 PM IST
ಕಸ ಸಂಗ್ರಹಣಾ ವಾಹನ ಚಲಾಯಿಸುತ್ತಿರುವ ಮಂಜುಳಾ ಮಾದರ. | Kannada Prabha

ಸಾರಾಂಶ

ರೋಣ ತಾಲೂಕಿನ ಜಕ್ಕಲಿ ಗ್ರಾಮದ ಮಹಿಳೆಯೋರ್ವಳು ಸ್ವಚ್ಛವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ರೋಣ: ತಾಲೂಕಿನ ಜಕ್ಕಲಿ ಗ್ರಾಮದ ಮಹಿಳೆಯೋರ್ವಳು ಸ್ವಚ್ಛವಾಹಿನಿ ಚಾಲಕಿಯಾಗಿ ಕೆಲಸ ಮಾಡುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಜಕ್ಕಲಿ ಗ್ರಾಪಂನಲ್ಲಿ ಸ್ವ-ಸಹಾಯ ಸಂಘದ ಮೂಲಕ ಚಾಲನಾ ತರಬೇತಿ ಪಡೆದು ಮಂಜುಳಾ ಯಲ್ಲಪ್ಪ ಮಾದರ ಸ್ವಚ್ಛವಾಹಿನಿ ಚಾಲಕಿಯಾಗಿ ಕಳೆದ 6 ತಿಂಗಳಿಂದ ಕೆಲಸ ಮಾಡುತ್ತಿದ್ದಾಳೆ.

ಇತ್ತೀಚಿಗೆ ಅಲ್ಲಲ್ಲಿ ಕೆಲವೇ ಕೆಲವು ಮಹಿಳೆಯರು ಬಸ್, ಲಾರಿ ಮೊದಲಾದ ಭಾರಿ ವಾಹನಗಳನ್ನು ವೃತ್ತಿ ಪರವಾಗಿ ಚಾಲನೆ ಮಾಡುವುದು ಕಂಡುಬರುತ್ತಿದೆ. ಮಲ್ಲವ್ವ ಭರಮಪ್ಪ ಮಾದರ, ಶಿವವ್ವ ಈರಪ್ಪ ಮಾದರ, ರೇಣುಕಾ ಪ್ರಶಾಂತ ಮಾದರ ಅವರು ಕಸ ವಿಂಗಡಣೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಹಿಳೆಯರೇ ಸ್ವಚ್ಛ ವಾಹಿನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.ಗ್ರಾಪಂ ವತಿಯಿಂದ ಮನೆ ಮನೆಗೆ ತೆರಳಿ ಒಣ ಕಸವಾದ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ಪ್ಲಾಸ್ಟಿಕ್ ಚೀಲ, ಬಳಸಿ ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಕಸ ವಿಲೇವಾರಿ ಘಟಕದಲ್ಲಿ ವಿಂಗಡಿಸಿ, ವರ್ಷಾಂತ್ಯದಲ್ಲಿ ಅವುಗಳನ್ನು ಹರಾಜು ಹಾಕುವ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ತೊಡಗಿದ್ದಾರೆ. ಅಲ್ಲದೆ ಪ್ರತಿ ಮನೆಗೆ ತಿಂಗಳಿಗೆ ರು. 30 ಮತ್ತು ಅಂಗಡಿಗಳಿಗೆ ರು.100 ಗಳನ್ನು ಸಂಗ್ರಹಿಸಿ ಅದರಲ್ಲೇ ತಮ್ಮ ವೇತನ ಪಾವತಿ ಮಾಡಿಕೊಂಡು, ಉಳಿದ ಹಣವನ್ನು ಉಳಿತಾಯ ಮಾಡಲು ಯೋಜನೆ ರೂಪಿಸಲಾಗಿದೆ. ಮಹಿಳೆಯರು ಸ್ವಚ್ಛತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇವರ ಕಾರ್ಯಕ್ಕೆ ಗ್ರಾಪಂ ಅಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಸಿಬ್ಬಂದಿಗಳು ಬೆಂಬಲವಾಗಿ ನಿಂತಿದ್ದಾರೆ.

ಇತ್ತೀಚೆಗೆ ಜಕ್ಕಲಿ ಗ್ರಾಪಂಗೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಶೇಂಗಾ ಎಣ್ಣೆ, ಕುಸುಬೆ ಎಣ್ಣೆ ಗಾಣದ ಮೂಲಕ ಸಹ ಸ್ವ ಸಹಾಯ ಸಂಘದ ಮಹಿಳೆಯರು ಆದಾಯ ಗಳಿಸುತ್ತಿರುವ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದರು. ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸ್ವ ಸಹಾಯ ಸಂಘದವರನ್ನು ಪ್ರೋತ್ಸಾಹಿಸಲು ಗ್ರಾಮ ಪಂಚಾಯತಿ ಯೋಜನೆ ರೂಪಿಸಲಾಗುತ್ತಿದೆ. ಗ್ರಾಮದ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಹಿನ್ನೆಲೆ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಜೊತೆಗೂಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕು ಪಂಚಾಯಿತಿಯೂ ಕೂಡ ಹಲವು ಯೋಜನೆ ರೂಪಿಸಲಾಗುತ್ತಿದೆ ಎಂದು ಮಹಿಳೆಯರ ಜೊತೆಗೆ ಚರ್ಚೆ ನಡೆಸಿದರು.

ಜಕ್ಕಲಿ ಗ್ರಾಮದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದಿಂದ ಗ್ರಾಮದ ಸ್ವಚ್ಛತೆ ಜೊತೆಗೆ ಸ್ವ ಸಹಾಯ ಸಂಘಗಳು ಸಬಲೀಕರಣಗೊಳ್ಳುತ್ತಿವೆ. ಮೇಲಧಿಕಾರಿಗಳ ಸಲಹೆ, ಮಾರ್ಗದರ್ಶನ ಮೂಲಕ ಇದು ಸಾಧ್ಯಾವಾಗಿದೆ ಎಂದು ಜಕ್ಕಲಿ ಪಿಡಿಒ ಶಿವಯೋಗಿ ರಿತ್ತಿ ಹೇಳಿದರು.

ಸ್ವ ಸಹಾಯ ಸಂಘದ ಮೂಲಕ ಡ್ರೈವಿಂಗ್ ಟ್ರೈನಿಂಗ್ ಪಡೆದುಕೊಂಡು ಕಳೆದ 6 ತಿಂಗಳಿಂದ

ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ ಕಸ ಸಂಗ್ರಹಿಸಿ ಗ್ರಾಮವನ್ನು ಸ್ವಚ್ಛಗೊಳಿಸುವಲ್ಲಿ ಖುಷಿ ಇದೆ. ಇದರಿಂದ ಸ್ವಂತ ದುಡಿಮೆ ಮತ್ತು ಆದಾಯ ಗಳಿಸುವ ಖುಷಿ ಇದೆ ಎಂದು ಸ್ವಚ್ಛ ವಾಹಿನಿ ಚಾಲಕಿ ಮಂಜುಳಾ ಯಲ್ಲಪ್ಪ ಮಾದರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!