ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಹೊರಟಿದ್ದ ವಿದ್ಯಾ ಮಂಜುನಾಥ ಗೌಡರ (38) ಅವರ ಪಾಲಿಗೆ ಗಾಳಿಪಟದ ಹರಿತವಾದ ಮಾಂಜಾ ದಾರವೇ ಯಮಪಾಶವಾಗಿ ಬಿಗಿದಿದೆ.
ಹುಬ್ಬಳ್ಳಿ:
ಗುರುವಾರ ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಹೊರಟಿದ್ದ ವಿದ್ಯಾ ಮಂಜುನಾಥ ಗೌಡರ (38) ಅವರ ಪಾಲಿಗೆ ಗಾಳಿಪಟದ ಹರಿತವಾದ ಮಾಂಜಾ ದಾರವೇ ಯಮಪಾಶವಾಗಿ ಬಿಗಿದಿದೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ಅವರ ಕುತ್ತಿಗೆಗೆ ದಾರ ಸಿಲುಕಿ, ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯ ದಾರುಣ ಅಂತ್ಯ ಹುಬ್ಬಳ್ಳಿಯಲ್ಲಿ ನಿಷೇಧಿತ ಮಾಂಜಾದಾರದ ಅಪಾಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಕಾರವಾರ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹಳೇಹುಬ್ಬಳ್ಳಿಯ ಬೀರಬಂದ್ ಓಣಿಯ ನಿವಾಸಿ ವಿದ್ಯಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸಿದ್ಧಾರೂಢ ಮಠದ ಸಮೀಪ ಅವರ ಕುತ್ತಿಗೆಗೆ ಮಾಂಜಾದಾರ ಸಿಲುಕಿದೆ. ಹರಿತವಾದ ದಾರ ಬಿಗಿದಿದ್ದರಿಂದ ತೀವ್ರ ಗಾಯದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮರುಕಳಿಸುತ್ತಿರುವ ದುರಂತ:
ಗಾಳಿಪಟ ಹಾರಿಸುವವರ ಸಂಭ್ರಮ ಮತ್ತೊಂದು ಕುಟುಂಬಕ್ಕೆ ಶಾಶ್ವತ ನೋವು ತಂದಿದೆ. ಇತ್ತೀಚೆಗೆ ತೊರವಿಹಕ್ಕಲದಲ್ಲಿ 18 ವರ್ಷದ ಬಾಲಕನ ಕಾಲಿಗೆ ಮಾಂಜಾದಾರ ಸಿಲುಕಿ ಗಾಯವಾಗಿತ್ತು. ಅ. 1ರಂದು ಬಂಕಾಪುರ ಚೌಕದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೂ ದಾರ ಸಿಲುಕಿ ತೀವ್ರ ಗಾಯವಾಗಿತ್ತು. ಸರಣಿ ಅವಘಡಗಳ ನಡುವೆಯೂ ಮತ್ತೊಂದು ಜೀವ ಬಲಿಯಾಗಿರುವುದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.
ವರದಿ, ಎಚ್ಚರಿಕೆಗೂ ಬಗ್ಗದ ಮಾಂಜಾ:
ಮಾಂಜಾದಾರದ ಅಪಾಯದ ಕುರಿತು ಕನ್ನಡಪ್ರಭ ಅ. 6ರಂದು "ನಿಷೇಧವಿದ್ದರೂ ಮಾಂಜಾದಾರಕ್ಕೆ ಬೀಳದ ಬ್ರೇಕ್ ", ಅ. 7ರಂದು "ಮಾಂಜಾದಾರ ಮಾರಾಟಕ್ಕೆ ಬೀಳುವುದೇ ಕಡಿವಾಣ? " ಶೀರ್ಷಿಕೆಗಳಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಎಲ್ಲ ಠಾಣೆಗಳ ಇನ್ಸ್ಪೆಕ್ಟರ್ಗಳಿಗೆ ಮಾರಾಟ ಮಳಿಗೆಗಳ ಪರಿಶೀಲನೆಗೆ ಸೂಚಿಸಿದ್ದರು. ನಿಷೇಧಿತ ದಾರದ ಮಾರಾಟ ಅಥವಾ ಬಳಕೆ ಕಂಡುಬಂದರೆ 112ಕ್ಕೆ ಮಾಹಿತಿ ನೀಡುವಂತೆಯೂ ಮನವಿ ಮಾಡಿದ್ದರು. ಆದರೆ, ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ಯಾವುದೇ ಕ್ರಮವಾಗಿರಲಿಲ್ಲ.
ಆದರೂ ದುರಂತ ಸಂಭವಿಸಿರುವುದು ನಿಷೇಧದ ಪರಿಣಾಮಕಾರಿ ಅನುಷ್ಠಾನದ ಕುರಿತು ಪ್ರಶ್ನೆ ಮೂಡಿಸಿದೆ. ಮಾಂಜಾದಾರದ ಮಾರಾಟದ ಮೂಲ ಪತ್ತೆಹಚ್ಚಿ, ದಾಸ್ತಾನು ವಶಪಡಿಸಿಕೊಳ್ಳುವ ಜತೆಗೆ ಮಾರಾಟಗಾರರು ಮತ್ತು ಬಳಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಗಾಳಿಪಟದ ಸಂಭ್ರಮ ಜೀವಹಾನಿಗೆ ಕಾರಣವಾಗಬಾರದು. ವಿದ್ಯಾ ಅವರ ಸಾವು ಮತ್ತೊಂದು ಸುದ್ದಿಯಾಗಿ ಮರೆಯಾಗದೆ, ಮಾಂಜಾದಾರದ ಮಾರಾಟ ಮತ್ತು ಬಳಕೆಗೆ ಶಾಶ್ವತ ಕಡಿವಾಣ ಹಾಕುವ ಎಚ್ಚರಿಕೆಯಾಗಬೇಕಿದೆ. ಇನ್ನಾದರೂ ಜಿಲ್ಲಾಡಳಿತ ಪೊಲೀಸ್ ಇಲಾಖೆ ಮಾಂಜಾದಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪೋಷಕರಿಗೂ ಕಾನೂನು ಕ್ರಮ: ಆಯುಕ್ತರ ಎಚ್ಚರಿಕೆ
ಮಹಿಳೆಯ ಸಾವು ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಾಂಜಾದಾರ ಬಳಸಿ ಪತಂಗ ಹಾರಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತರು ಬಳಸಿದರೆ ಅವರ ಪೋಷಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಎಚ್ಚರಿಸಿದ್ದಾರೆ. ಈಗಾಗಲೇ ಇನ್ಸ್ಪೆಕ್ಟರ್ಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದ್ದು, ದಾರ ಪತ್ತೆಯಾದಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.ಮಾಂಜಾ ದಾರಕ್ಕೆ ಯುವಕನ ಮೂಗು ಕಟ್
ಮಹಿಳೆ ಬಲಿಯಾದ ಬೆನ್ನಲ್ಲೇ ಮಾಂಜಾದಾರದಿಂದ ಗುರುವಾರ ಮತ್ತೊಂದು ಅವಘಡ ನಡೆದಿದೆ. ಹುಬ್ಬಳ್ಳಿಯ ಉಣಕಲ್ಲ ಬಳಿ ಮುಖ್ಯ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಯುವಕನಿಗೆ ಮಾಂಜಾದಾರ ತಾಗಿ ಮೂಗೇ ಕಟ್ಟಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ಸವಾರರು ಹಾಗೂ ಸಾರ್ವಜನಿಕರು ಗಾಯಗೊಂಡ ಯುವಕನನ್ನು ಉಪಚರಿಸಿ ಆಸ್ಪತ್ರೆಗೆ ಕಳಿಸಿದ್ದಾರೆ.
ಮಾಂಜಾದಾರದಿಂದ ಯುವತಿ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ನಿಷೇಧವಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ. ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ಜಂಟಿಯಾಗಿ ನಿರಂತರ ಕಾರ್ಯಾಚರಣೆ ನಡೆಸಿ, ಮಾರಾಟಗಾರರನ್ನು ಪತ್ತೆಹಚ್ಚಿ ದಾಸ್ತಾನು ವಶಪಡಿಸಿಕೊಳ್ಳಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.