ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರುವಾಗಿ ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿಯಾಗಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯ ಪಾತ್ರ ಅವಿಸ್ಮರಣೀಯ
ನರಗುಂದ: ಹುಟ್ಟಿದ ಪ್ರತಿಯೊಂದು ಹೆಣ್ಣು ಮಗು ತನ್ನ ಜೀವನದುದ್ದಕ್ಕೂ ಮಗಳು,ಹೆಂಡತಿ, ತಾಯಿ, ಸ್ನೇಹಿತೆ, ಸಹೋದರಿ, ಸಹದ್ಯೋಗಿಯಾಗಿ ಹೀಗೆ ಹಲವಾರು ಹಂತಗಳನ್ನು ಪೂರೈಸುತ್ತಾಳೆ ಎಂದು ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಭಕ್ಕನವರು ಹೇಳಿದರು.
ಅವರು ಬುಧವಾರ ಪಟ್ಟಣದ ಶ್ರೀಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂದೆ-ತಾಯಿ, ಗಂಡ, ಮಕ್ಕಳು, ಕಚೇರಿ ಹೀಗೆ ತನ್ನವರನ್ನು ತನ್ನ ಕೆಲಸವನ್ನು ಅತ್ಯಂತ ಅಚ್ಚಕಟ್ಟಾಗಿ,ಕಾಳಜಿಯಿಂದ, ಸಹನೆಯಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಆದರೂ ನಮ್ಮ ಸಮಾಜದಲ್ಲಿ ಹೆಣ್ಣು ಹೆಚ್ಚು ಶೋಷಣೆಗೆ ಒಳಗಾಗುವುದು ದುರ್ದೈವದ ಸಂಗತಿ. ಹೀಗಾಗಿ ಹೆಣ್ಣಿಗೆ ಉನ್ನತ ಸ್ಥಾನಮಾನ ನೀಡಬೇಕು ಎನ್ನುವ ಕೂಗು ಎಂದಿನಿಂದಲೂ ಇದೆ.ಆದರೆ ಇಂದಿಗೂ ಕೂಡ ಒಂಟಿ ಮಹಿಳೆ ತಡರಾತ್ರಿ ಇರಲಿ ಹಗಲಲ್ಲೂ ನಿರ್ಭಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ.ಇಂತಹ ಸಮಸ್ಯೆಗಳ ನಡುವೆಯೂ ಮಹಿಳೆ ರಾಜಕೀಯವಾಗಿ,ಸಾಮಾಜಿಕವಾಗಿ ಹಲವಾರು ಕ್ಷೇತ್ರಗಳಲ್ಲಿ ಮುಂದಿದ್ದಾಳೆ.ಹಲವಾರು ರಂಗಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ ಎಂದರು.
ಪ್ರಾಚಾರ್ಯ ಆರ್.ಬಿ. ಪಾಟೀಲ್ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ ಸ್ತ್ರೀ ಅಬಲೆಯಲ್ಲ ಸಬಲೇ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ ಎಂದರು.
ಉಪನ್ಯಾಸಕಿ ಎಸ್.ಎ. ಬಾರಕೇರ ಮಾತನಾಡಿ, ಒಂದು ಕುಟುಂಬ, ಸಮಾಜದ ಬಹುದೊಡ್ಡ ಶಕ್ತಿಯಾಗಿ ಮಹಿಳೆಯ ಪಾತ್ರ ಹಿರಿದಾಗಿದೆ, ಮೌಲ್ಯಗಳು ಕುಸಿದು ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರುವಾಗಿ ಪ್ರತಿಯೊಬ್ಬರ ಬದುಕಿನ ದಿವ್ಯ ಶಕ್ತಿಯಾಗಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯ ಪಾತ್ರ ಅವಿಸ್ಮರಣೀಯ ಎಂದರು.
ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯರಾದ ಮಂಜುಳಾ ಪಾಟೀಲ, ಲಕ್ಷ್ಮೀಬಾಯಿ ಪಾಟೀಲ, ತೇಜಸ್ವಿನಿ ದುಂದೂರ, ಪವಿತ್ರ ಈಟಿ, ಜ್ಯೋತಿ ಜಾಮದಾರ, ಯಶೋಧ ನರಸಿಂಗನವರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.