ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಕಲ ಜೀವರಾಶಿಗಳ ಸೃಷ್ಠಿಗೆ ಹೆಣ್ಣು ಕಾರಣಕರ್ತಳಾಗಿದ್ದಾಳೆ. ಅವಳಿಲ್ಲದಿದ್ದರೆ ಮಾನವ ಕುಲವೇ ಶೂನ್ಯ ಎಂದು ಎಂಎಸ್ಐಎಲ್‌ನ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ನಳಿನಿಗೌಡ ಹೇಳಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಉದ್ಘಾಟಿಸಿ ಅವರು ಮಾತನಾಡಿದರು. ತ್ಯಾಗಮಯಿ, ಸ್ನೇಹಮಯಿ, ಪ್ರೇಮ ಕಾರಂಜಿಯಾಗಿರುವ ಹೆಣ್ಣು ಎಲ್ಲಿ ಪೂಜಿಸಲ್ಪಡುತ್ತಾಳೋ ಅಲ್ಲಿಯೇ ದೇವತೆಗಳು ನೆಲೆಸಿರುತ್ತಾರೆ.ಹೆಣ್ಣನ್ನು ನೀರೆ ಎಂದು ಕರೆಯುತ್ತಾರೆ ನಾನಾ ಪಾತ್ರಗಳಲ್ಲಿ ಹೆಣ್ಣು ಗುರುತಿಸಿಕೊಂಡಿದ್ದು, ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಸ್ನೇಹಿತೆಯಾಗಿ ನಿಷ್ಕಲ್ಮಶ ಮನಸ್ಸುಳ್ಳವಳಾಗಿದ್ದಾಳೆ ಎಂದು ಹೇಳಿದರು.ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಪ್ರಿಯದರ್ಶಿನಿ ಇಂದಿರಾಗಾಂಧಿ, ಕಲ್ಪನಾ ಚಾವ್ಲಾ ಮುಂತಾದ ಇತಿಹಾಸ ಸೃಷ್ಠಿಸಿದ ಮಹಿಳೆಯರನ್ನು ಸ್ಮರಿಸಿದ ನಳಿನಿಯವರು, ಬೆಳಕಿಗೆ ಬಾರದೆ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಸೇವೆಯನ್ನು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಹೆಣ್ಣು ಎಂದರೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಹಾಗೂ ಮಕ್ಕಳನ್ನು ಹೆರುವಯಂತ್ರವಾಗಬಾರದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಹಿಳೆ ತ್ಯಾಗಕ್ಕೆ ನಿಜ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಪ್ರತಿದಿನ ನಡೆಯಬೇಕು ಎಂದು ಹೇಳಿದರು.ಆಹಾರ ವಿಜ್ಞಾನದಲ್ಲಿ ಪಿಎಚ್ ಡಿ ಪಡೆದ ಡಾ. ರಶ್ಮಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮನ್ನು ನಾವು ಈ ಸಮಾಜದ ಆಗುಹೋಗುಗಳ ಬಗ್ಗೆ ತೊಡಗಿಸಿಕೊಳ್ಳಬೇಕೆಂದರೆ ಎಲ್ಲಾ ರಂಗಗಳಲ್ಲಿ ಮಹಿಳೆ ಸಕ್ರಿಯರಾಗಿರಬೇಕು ಇದಕ್ಕೆ ಶಕ್ತಿಶಾಲಿಯಾದ ಶಿಕ್ಷಣ ಪಡೆಯುವುದು ಅಗತ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್ ಮಾತನಾಡಿ, ವಜ್ರದಷ್ಟು ಕಠೋರ, ಕುಸುಮದಷ್ಟು ಮೃದು ಈ ಗಾದೆ ಮೂಲಕ ಹಿಂದೆ ಶ್ರೀ ರಾಮನನ್ನು ಪೂಜಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಗಾದೆಯನ್ನು ಮಹಿಳೆಯರಿಗೆ ಹೋಲಿಸಿದ್ದಾರೆ. ವಜ್ರದಷ್ಟು ಆತ್ಮ ಶಕ್ತಿ ಹೊಂದಿ ಏನೇ ಕಷ್ಟ ಬಂದರು ಮಹಿಳೆ ಎದುರಿಸಿತ್ತಾಳೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯ ಸುಕುಮಾರ್, ಕಾರ್ಯದರ್ಶಿ ಅಮಿತಾ ವಿಜೇಂದ್ರ, ಸಹ ಕಾರ್ಯದರ್ಶಿ ಕೋಮಲ ರವಿ, ನಿರ್ದೇಶಕರಾದ ಮಂಜುಳಾ ಹರೀಶ್, ಚಂಪಾ ಜಗದೀಶ್, ವೇದ ಚಂದ್ರ ಶೇಖರ್, ಅನುಪಮ ರಮೇಶ್, ವಿನುತ ಪ್ರಸಾದ್, ಕೀರ್ತಿ ಕೌಶಿಕ್, ಸಂಧ್ಯಾ ನಾಗೇಶ್, ರಾಜೇಶ್ವರಿ ಅಭಿಷೇಕ್, ಸುನಿತಾ ನವೀನ್, ತನುಜಾ ಸುರೇಶ್, ಸವಿತಾ ರಮೇಶ್ ಉಪಸ್ಥಿತರಿದ್ದರು. 26 ಕೆಸಿಕೆಎಂ 5ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಳಿನಿಗೌಡ ಉದ್ಘಾಟಿಸಿದರು. ಕಲ್ಪನಾ ಪ್ರದೀಪ್, ಸವಿತಾ ರಮೇಶ್, ಕಾವ್ಯ ಸುಕುಮಾರ್ ಇದ್ದರು.