ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿವಾಹ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯವು ಪತ್ನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದೆ.ಬೆಳ್ತಂಗಡಿ ಪಣಕಜೆ ಮುಂಡಾಡಿ ನಿವಾಸಿ ಉದಯ ನಾಯಕ್ ಅವರು ಮುಂಬೈಯ ಅನಿತಾ ನಾಯಕ್ ಎಂಬವರನ್ನು ೨೦೧೮ರಲ್ಲಿ ವಿವಾಹವಾಗಿದ್ದರು. ಆದರೆ ಒಂದು ವರ್ಷದ ಬಳಿಕ ದಾಂಪತ್ಯದಲ್ಲಿ ಅಡೆತಡೆ ಬಂದ ಹಿನ್ನೆಲೆ ಮಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಜೀವನಾಂಶವಾಗಿ ಪತ್ನಿ ಪ್ರತಿ ತಿಂಗಳು ೩೦ ಸಾವಿರ ನೀಡುವಂತೆ ಕೋರಿಕೊಂಡಿದ್ದರು.
ಈ ನಡುವೆ ಪತ್ನಿ ಅನಿತಾ ನಾಯಕ್ ಪತಿಗೆ ತಿಳಿಯದಂತೆ ಮುಂಬೈಯಲ್ಲಿ ಬೇರೊಬ್ಬರೊಂದಿಗೆ ೨೦೨೩ರಲ್ಲಿ ವಿವಾಹವಾಗಿದ್ದರು. ಈ ವಿಚಾರ ತಿಳಿದ ಉದಯ್ ನಾಯಕ್ ಸಾಕ್ಷ್ಯ ಸಮೇತ ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ಫಿರ್ಯಾದು ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಎಸಿಜೆ ಮತ್ತು ಎಫ್‌ಸಿಜೆಎಂ ವಿಜಯೇಂದ್ರ ಟಿ.ಎಚ್. ಅವರು ಉದಯ್ ಅವರು ಸಲ್ಲಿಸಿದ ಖಾಸಗಿ ದೂರನ್ನು ಒಪ್ಪಿಕೊಂಡು ಐಪಿಸಿಯ ಸೆಕ್ಷನ್ ೩೪, ೧೨೦ ಬಿ ಮತ್ತು ೪೯೪ ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಪುಂಜಾಲಕಟ್ಟೆ ಪೊಲೀಸರಿಗೆ ಸೂಚಿಸಿದ್ದಾರೆ.
ಪತಿಯಿಂದಲೇ ಗೌಪ್ಯ ಕಾರ್ಯಾಚರಣೆ:ಪತ್ನಿ ಗೌಪ್ಯವಾಗಿ ಎರಡನೇ ವಿವಾಹವಾಗಿರುವುದನ್ನು ಖಚಿತಪಡಿಸುವ ಸಲುವಾಗಿ ಉದಯ ನಾಯಕ್ ಅವರು ಖುದ್ದು ಪತ್ತೆದಾರಿಗೆ ಮುಂದಾಗಿದ್ದರು. ಪತ್ನಿ ಅನಿತಾ ನಾಯಕ್ ಮುಂಬೈಯ ಡೊಂಬಿವಲಿಯ ಪ್ಯಾನೇಶಿಯಾದಲ್ಲಿ ವ್ಯಕ್ತಿಯೊಂದಿಗೆ ೨೦೨೩ ಮಾರ್ಚ್ ೧೩ ಎರಡನೇ ವಿವಾಹವಾಗಿರುವುದನ್ನು ಪತ್ತೆಹಚ್ಚಿದ್ದರು. ಅದು ಮಹಾರಾಷ್ಟ್ರ ಗೆಜೆಟ್ ಕಚೇರಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ ಅನಿತಾ ನಾಯಕ್ ಅವರು ಅನಿತಾ ಹರಿಕೃಷ್ಣ ಕೀಲು ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಈ ಮಾಹಿತಿಯನ್ನು ಉದಯ ಅವರು ಆರ್‌ಟಿಐನಲ್ಲಿ ಸಂಗ್ರಹಸಿದ್ದರು. ಜತೆಗೆ ಅನಿತಾ ಅವರ ಸಂಬಂಧಿಕರ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಫೋಟೋ ಸಂಗ್ರಹಿಸಿ ಮಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಲಯದ ಪ್ರಧಾನ ನ್ಯಾಯಾಧೀಶರು ಈ ಪುರಾವೆಯನ್ನು ಅಂಗೀಕರಿಸಿದರಲ್ಲದೆ, ಉದಯ್ ನಾಯಕ್ ಅವರ ಅರ್ಜಿಯ ಹೆಚ್ಚಿನ ತನಿಖೆಗೂ ನಿರ್ದೇಶಿಸಿತ್ತು. ಬಳಿಕ ಉದಯ್ ಅವರು ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ಪಿರ್ಯಾದು ಸಲ್ಲಿಸಿದಾಗ ಈ ವಿಚಾರವಾಗಿ ಪತ್ನಿ ಅನಿತಾ ಹಾಗೂ ತಂದೆ ರಾಮಚಂದ್ರ ನಾಯಕ್, ಅನಿತಾ ಅವರನ್ನು ಮದುವೆಯಾದ ಹರಿಕೃಷ್ಣ ಗಣಪತ್ ರಾವ್ ಕೀಲು ಹಾಗೂ ತಂದೆ ಗಣಪತ್ ರಾವ್ ಕೀಲು, ತಾಯಿ ಚಂದ್ರಾವತಿ ಕೀಲು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.