ಬಳ್ಳಾರಿಯಲ್ಲಿ ಮಹಿಳೆಗೆ ಪೊಲೀಸರಿಂದಲೇ ಲೈಂಗಿಕ ದೌರ್ಜನ್ಯ: ಕೇಸು ದಾಖಲು

KannadaprabhaNewsNetwork |  
Published : Dec 13, 2024, 12:48 AM IST
ಸ | Kannada Prabha

ಸಾರಾಂಶ

ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾನ್‌ಸ್ಟೇಬಲ್‌ ಒಬ್ಬನನ್ನು ಬುಧವಾರ ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ಬಳ್ಳಾರಿ: ಠಾಣೆಗೆ ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾನ್‌ಸ್ಟೇಬಲ್‌ ಒಬ್ಬನನ್ನು ಬುಧವಾರ ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ನಗರದ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಆಜಾದ್ ಬಂಧಿತ ಆರೋಪಿ. ನಗರದ ಕೌಲ್ ಬಜಾರ್ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ ಸೈಯದ್ ಇಮ್ರಾನ್ ಪರಾರಿಯಾಗಿದ್ದಾನೆ. ಈತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ಸಂಸಾರದಲ್ಲಿ ಬಿರುಕು ಮೂಡಿ, ಪತಿಯ ವಿರುದ್ಧ ದೂರು ನೀಡಲು ಬಂದ ನೊಂದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರ ಲೈಂಗಿಕ ದೌರ್ಜನ್ಯ: ನಗರದ ಬಂಡಿಹಟ್ಟಿ ವೃತ್ತದ ಪದ್ಮಶ್ರೀ ಕಾಲನಿಯ 35 ವರ್ಷದ ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ಕೌಲ್ ಬಜಾರ್ ಠಾಣೆಯಲ್ಲಿ 2023ರ ಎಪ್ರಿಲ್‌ 19ರಂದು ದೂರು ನೀಡಲು ತೆರಳಿದ್ದರು. ಈ ವೇಳೆ ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಸೈಯದ್ ಇಮ್ರಾನ್, ಈ ಪ್ರಕರಣವು ಮಹಿಳಾ ಠಾಣಾ ವ್ಯಾಪ್ತಿಗೆ ಬರಲಿದ್ದು, ಸಹಾಯ ಮಾಡುವುದಾಗಿ ನೊಂದ ಮಹಿಳೆಯ ಮೊಬೈಲ್ ನಂಬರ್‌ ಪಡೆದಿದ್ದ. ನಂತರ ಎಪ್ರಿಲ್‌ 20ರಂದು ಮಹಿಳೆಗೆ ತನ್ನ ಪತಿ ಪುನಃ ಮನೆ ಖಾಲಿ ಮಾಡುವಂತೆ ಗಲಾಟೆ ಮಾಡಿದಾಗ ನೊಂದ ಮಹಿಳೆಯು ಸೈಯದ್ ಇಮ್ರಾನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಇಮ್ರಾನ್ ₹15 ಸಾವಿರ ಧನಸಹಾಯ ಮಾಡಿದ್ದಾರೆ. ಬಳಿಕ ಆ ಹಣದಲ್ಲಿ ಮಹಿಳೆ ಕೌಲ್ ಬಜಾರ್‌ನಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದಳು. ಈ ವೇಳೆ ಆರೋಪಿ ಇಮ್ರಾನ್ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಆಕೆಯನ್ನು ಐದು ತಿಂಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಂತರ ಬಳ್ಳಾರಿ ಸಂಚಾರ ಠಾಣೆಯ ಸಿಬ್ಬಂದಿ ಆಜಾದ್ ನೊಂದ ಮಹಿಳೆಗೆ ಎರಡು ತಿಂಗಳೊಳಗೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಆತನೂ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಇಬ್ಬರು ಮದುವೆ ಮಾಡಿಕೊಳ್ಳದೇ ನಂಬಿಕೆ ದ್ರೋಹ ಎಸಗಿದ್ದಾರೆಂದು ಮಹಿಳೆಯು ನಗರದ ಮಹಿಳಾ ಠಾಣೆಗೆ ಬುಧವಾರ ದೂರು ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮತ್ತೋರ್ವನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ಇಬ್ಬರ ಅಮಾನತು: ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿಬಂದ ಬೆನ್ನಲ್ಲೇ ಆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಶೋಭಾರಾಣಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!