ಕಲುಷಿತ ನೀರಿಗೆ ಮಹಿಳೆ ಬಲಿ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಕಾರಿಗನೂರಿನ ಆರ್‌ಬಿಎಸ್‌ಎಸ್‌ಎನ್ ಕ್ಯಾಂಪ್‌ನ ನಿವಾಸಿ ಸೀತಮ್ಮ (66) ಮೃತಪಟ್ಟ ಮಹಿಳೆ.

ಹೊಸಪೇಟೆ: ನಗರದ ಕಾರಿಗನೂರು ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ ಉಂಟಾದ ವಾಂತಿ-ಭೇದಿಗೆ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

ಕಾರಿಗನೂರಿನ ಆರ್‌ಬಿಎಸ್‌ಎಸ್‌ಎನ್ ಕ್ಯಾಂಪ್‌ನ ನಿವಾಸಿ ಸೀತಮ್ಮ (66) ಮೃತಪಟ್ಟ ಮಹಿಳೆ.

ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ ಬಳ್ಳಾರಿ ವಿಮ್ಸ್‌ನಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರಿಗನೂರು ಶಿಕಾರಿ ಕ್ಯಾಂಪ್, ಆರ್‌ಬಿಎಸ್‌ಎಸ್‌ಎನ್‌ ಕ್ಯಾಂಪ್, ಕೊಟ್ಟೂರೇಶ್ವರ ನಗರ ಮತ್ತು ಹಂಪಿನಕಟ್ಟೆ ಪ್ರದೇಶದಲ್ಲಿ ೨೭ ವಾಂತಿ-ಭೇದಿ ಪ್ರಕರಣಗಳು ಕಂಡುಬಂದಿವೆ. ಕಲುಷಿತ ನೀರು ಸರಬರಾಜಿನಿಂದ ಈ ಸಮಸ್ಯೆ ಉಂಟಾಗಿತ್ತು. ಈ ಹಿಂದೆ ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈಗ ಕಾರಿಗನೂರಿನಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

೨೭ಕ್ಕೆ ಏರಿಕೆ: ಕಲುಷಿತ ನೀರು ಸೇವನೆ ಮಾಡಿದ ಪರಿಣಾಮ ನಗರದ ೨೪ನೇ ವಾರ್ಡ್‌ನ ಕಾರಿಗನೂರು ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಕ್ಕೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಭಾನುವಾರ ೨೭ಕ್ಕೆ ಏರಿದೆ.ಈ ನಡುವೆ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಕಾರಿಗನೂರು ಶಿಕಾರಿ ಕ್ಯಾಂಪ್‌ಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ವೇಳೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದೇ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಗರಸಭೆ ಎಇಇ ಸತೀಶ್ ಹಾಗೂ ಇತರೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಕಾರಿಗನೂರು ಗ್ರಾಮಕ್ಕೆ ಕಳೆದ ನಾಲ್ಕಾರು ದಿನದಿಂದಲೇ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಆದರೆ, ಏಕಾಏಕಿ ಜನರು ಆಸ್ಪತ್ರೆಗೆ ಬರಲು ಆರಂಭಿಸಿದ್ದಾರೆ. ಗ್ರಾಮಕ್ಕೆ ಪೂರೈಕೆಯಾಗುವ ನೀರನ್ನು ಪರಿಶೀಲನೆ ಮಾಡಿದಾಗ ಕಲುಷಿತ ನೀರು ಪೂರೈಕೆ ಆಗಿರುವುದು ಬೆಳಕಿಗೆ ಬಂದಿದೆ. ಜತೆಗೆ ಕಾರಿಗನೂರು ಗ್ರಾಮಕ್ಕೆ ತುಂಗಭದ್ರಾ ಜಲಾಶಯದಿಂದ ಕಳೆದ ೨೦ ವರ್ಷದ ಹಿಂದೆ ನೀರು ಸರಬರಾಜಿಗೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ, ಅಳವಡಿಕೆಯಾದ ಪೈಪ್‌ಲೈನ್‌ನಲ್ಲಿ ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ. ಗ್ರಾಮದಲ್ಲಿ ವಾಂತಿಭೇದಿ ಪ್ರಕರಣ ಹೆಚ್ಚಾಗುತ್ತಿದ್ದಂತೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೂಡಲೇ ಶುದ್ಧ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ದುರಸ್ತಿಗೊಳಿಸಬೇಕು. ಸಮಸ್ಯೆ ಬಗೆಹರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಗವಿಯಪ್ಪ ಎಚ್ಚರಿಸಿದರು.

ಶೋಕಾಸ್ ನೋಟಿಸ್:ಶುದ್ಧ ಕುಡಿಯುವ ನೀರು ಘಟಕದಿಂದ ಉಚಿತ ಕುಡಿಯುವ ನೀರು ಗ್ರಾಮಸ್ಥರಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ಪ್ರಕರಣ ಕುರಿತಂತೆ ಕಾರಿಗನೂರು, ಶಿಕಾರಿ ಕ್ಯಾಂಪ್‌ಗೆ ಕಲುಷಿತ ನೀರು ಸರಬರಾಜು ಆಗಿದೆ. ಕಲುಷಿತ ನೀರು ಪೂರೈಕೆಯಿಂದ ಆಗಿದ್ದರೆ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೭ ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅದರಲ್ಲಿ ೩ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯಕ್ ತಿಳಿಸಿದ್ದಾರೆ.ದೀಪದ ಕೆಳಗೆ ಕತ್ತಲು ಎಂಬಂತೆ ತುಂಗಭದ್ರಾ ಜಲಾಶಯ ಕೂಗಳತೆ ದೂರದಲ್ಲಿದ್ದರೂ ವಿಜಯನಗರ ಜಿಲ್ಲೆಯ ಜನರಿಗೆ ಮಾತ್ರ ಕುಡಿಯುವ ನೀರಿನ ಬವಣೆ ತಪ್ಪಿಲ್ಲದಿರುವುದು ನಿಜಕ್ಕೂ ವಿಪರ‍್ಯಾಸದ ಸಂಗತಿಯಾಗಿದೆ. ಈ ಕೂಡಲೇ ಕಾರಿಗನೂರು, ಶಿಕಾರಿಕ್ಯಾಂಪ್‌ಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಲೆಮಾರಿ, ಅರೆಅಲೆಮಾರಿ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರೆಪ್ಪ ಆಗ್ರಹಿಸಿದ್ದಾರೆ.

Share this article