ಸಮಾಜದ ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರೇ ಮುಂಚೂಣಿ: ನ್ಯಾ.ರಾಜೇಶ್ವರಿ ಹೆಗಡೆ

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ಲಿಂಗ ಆಧಾರಿತ ತಾರತಮ್ಯ, ಹಿಂಸೆ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಅಸಮಾನ ಪ್ರವೇಶ ಸೇರಿ ಮಹಿಳೆಯರು ಎದುರಿಸುತ್ತಿರುವ ನಿರಂತರ ಸವಾಲುಗಳು ಮತ್ತು ಅಡೆತಡೆಗಳ ಕುರಿತು ಚರ್ಚಿಸುವ ಒಂದು ಅವಕಾಶ ಒದಗಿಸುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೆಣ್ಣಿನ ಉಡುಗೆ-ತೊಡುಗೆ ಬಗ್ಗೆ ಚರ್ಚಿಸದೇ, ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದರೂ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲಿವೆ ಮತ್ತು ಸಮಾಜದಲ್ಲಿ ಬಾಲ್ಯ ವಿವಾಹದ ಪ್ರಕರಣ ತಗ್ಗಿಲ್ಲ ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತ ಅಪಾರ ಮಹತ್ವ ಹೊಂದಿದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಲಿಂಗ ಆಧಾರಿತ ತಾರತಮ್ಯ, ಹಿಂಸೆ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಅಸಮಾನ ಪ್ರವೇಶ ಸೇರಿ ಮಹಿಳೆಯರು ಎದುರಿಸುತ್ತಿರುವ ನಿರಂತರ ಸವಾಲುಗಳು ಮತ್ತು ಅಡೆತಡೆಗಳ ಕುರಿತು ಚರ್ಚಿಸುವ ಒಂದು ಅವಕಾಶ ಒದಗಿಸುತ್ತದೆ. ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಅನೇಕ ಸಮಾಜ ಸುಧಾರಕರ ಪ್ರತಿಫಲದಿಂದಾಗಿ ಇಂದು ಸಮಾಜದ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರ ಸಾಧನೆಗಳ ಗೌರವಿಸಲು ಸಮಾಜಕ್ಕೆ ಅವರ ಕೊಡುಗೆಗಳ ಗುರುತಿಸಲು ಮತ್ತು ಲಿಂಗ ಸಮಾನತೆಗಾಗಿ ಪ್ರತಿಪಾದಿಸಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಗತಿಕ ಸಂದರ್ಭವಾಗಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮಹಿಳೆಯರಿಗೆ ಸಮಾನ ಅವಕಾಶ ನೀಡಿ ವಚನ ಚಳವಳಿ ಕಟ್ಟಿದರು. ಮಹಿಳೆಯರ ಹಕ್ಕುಗಳಿಗಾಗಿ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಜ್ಯೋತಿಬಾಪುಲೆ, ರಾಜಾರಾಮ್ ಮೋಹನ್‌ರಾಯ್ ಮುಂತಾದವರು ಮಾಡಿದ ಹೋರಾಟ ಮತ್ತು ತ್ಯಾಗಗಳನ್ನು ನಾವು ಸ್ಮರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಾನಂದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾ, ವಕೀಲರಾದ ಟಿ.ಆರ್. ಗುರುಬಸವರಾಜ್, ಬಿ.ಎಂ. ಹನುಮಂತಪ್ಪ, ನಾಗಮಣಿ ಹಂಪಾಳಿ, ಸಿ.ಪಿ.ಅನಿತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರೇಖಾ ಖಮಿತ್ಕರ್, ನೇತ್ರಾವತಿ, ಅನಿತಾ, ಸಿ.ಪಿ.ಅನಿತಾ, ಮಹಾದೇವಿ ಹಿರೇಮಠ್, ಭಾಗ್ಯಲಕ್ಷ್ಮಿ ಆರ್. ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾ,ಗಾಯಿತ್ರಿ, ನಾಜಿಯಾ ಕೌಸರ್, ವಾಸಂತಿ ಉಪ್ಪಾರ್ ರನ್ನು ಸನ್ಮಾನಿಸಲಾಯಿತು.

ಅನ್ನಪೂರ್ಣೇಶ್ವರಿ, ಸುಜಿದಾಬಾನು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್. ಟಿ.ಎಚ್.ಮಧುಸೂದನ್, ಎಲ್.ನಾಗರಾಜ್, ಕೆ.ಎಂ.ನೀಲಕಂಠಯ್ಯ, ಎಂ.ರಾಘವೇಂದ್ರ, ಜಿ.ಜೆ.ಸಂತೋಷ್ ಕುಮಾರ್, ಇತರೆ ವಕೀಲರು ಹಾಜರಿದ್ದರು. ....

Share this article