ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗುತ್ತಿಲ್ಲ: ಲೇಖಕಿ ಡಾ.ಮೀನಾಕ್ಷಿ ಬಾಳಿ ಆರೋಪ

KannadaprabhaNewsNetwork |  
Published : Mar 30, 2024, 12:46 AM IST
ಮಹಿಳಾ ದಿನಾಚರಣೆ | Kannada Prabha

ಸಾರಾಂಶ

ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಿದ್ದರೂ ಶಾಸನ ಸಭೆಗಳಲ್ಲಿ ನಿರ್ಣಾಯಕವಾಗಿರುವ ರಾಜಕೀಯ ಮೀಸಲಾತಿಯನ್ನು ಕೊಡುತ್ತಿಲ್ಲ ಎಂದು ಲೇಖಕಿ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಿದ್ದರೂ ಶಾಸನ ಸಭೆಗಳಲ್ಲಿ ನಿರ್ಣಾಯಕವಾಗಿರುವ ರಾಜಕೀಯ ಮೀಸಲಾತಿಯನ್ನು ಕೊಡುತ್ತಿಲ್ಲ ಎಂದು ಲೇಖಕಿ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಹೇಳಿದರು.ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಘಟಕ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕ ಮಹಿಳೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕೊಡಬೇಕು ಎಂದು ಕಾನೂನು ಜಾರಿ ಮಾಡಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಬದಲಿಗೆ ಮಹಿಳೆಯರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುವುದು, ಮಹಿಳೆಯರಿಗಾಗಿ ಸೌಂದರ್ಯ ಲಹರಿ ಜಪ ಮಾಡಿಸುವ ಕೆಲಸ ನಡೆಯುತ್ತದೆ ಎಂದು ತಿಳಿಸಿದರು.ಪ್ರಸ್ತುತ ಸಮಾಜದಲ್ಲೂ ಮಹಿಳೆಯರನ್ನು ಕನಿಷ್ಟಗೊಳಿಸಲಾಗಿದೆ. ವ್ಯಾಪಾರಿ ಲೋಕ, ಬಂಡವಾಳಶಾಹಿ ಲೋಕ ಹೆಣ್ಣಮಕ್ಕಳನ್ನು ಮತ್ತದೇ ಸಾಂಪ್ರದಾಯಿಕವಾದದಲ್ಲೇ ಕಟ್ಟಿಹಾಕುವ ಕೆಲಸ ಮಾಡುತ್ತಿದೆ ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕು ಎಂದರು.ಟೈರ್ ಜಾಹಿರಾತಿನಲ್ಲೂ ಮಹಿಳೆಯರೇ ಇರಬೇಕು, ಸೇವಿಂಗ್ ಕ್ರೀಂ ಜಾಹಿರಾತಿಗೂ ಮಹಿಳೆಯನ್ನೇ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಜಾಹಿರಾತಿನಲ್ಲಿ ಮಹಿಳೆಯರನ್ನು ಬಳಸಿಕೊಳ್ಳುತ್ತಾ ಅವರನ್ನು ವಸ್ತುಗಳನ್ನಾಗಿ ಮಾಡಿದೆ. ಮಹಿಳೆಯರನ್ನು ವಿಸ್ಮೃತಿಗೆ ತಳ್ಳಲಾಗುತ್ತಿದೆ ಎಂದು ತಿಳಿಸಿದರು. ಹೆಣ್ಣನ್ನು ಕನಿಷ್ಠ ಅಂತ ತೋರಿಸುವಂತಹ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಚಿಕ್ಕಂದಿನಿಂದಲೂ ಇದೇ ರೀತಿ ನಡೆಸಿಕೊಳ್ಳಲಾಗುತ್ತದೆ. ಹೆಣ್ಣನ್ನು ಸಂಪ್ರದಾಯವಾದಿ ನೆಲೆಯಲ್ಲೇ ನೋಡಲು ಇಷ್ಟಪಡುತ್ತದೆ ಈ ಪುರುಷ ಸಮಾಜ. ಹುಟ್ಟುವಾಗ ನಾವೆಲ್ಲ ಮನುಷ್ಯರಾಗಿರುತ್ತೇವೆ. ಬೆಳೀತ, ಬೆಳೀತ ಹಿನ್ನೆಲೆಗೆ ಸರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಹೆಣ್ಣು ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಲೇ ಪುರುಷ ಸಮಾಜ ಹೆಣ್ಣಿನ ಮೇಲೆ ಕಟ್ಟಲೆಗಳನ್ನು ಹೇರುತ್ತದೆ. ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು. ಹೆಚ್ಚು ಮಾತನಾಡಬಾರದು, ಸುಮ್ಮಸುಮ್ಮನೆ ನಗಬಾರದು ಎಂದು ನಿರ್ಬಂಧಗಳನ್ನು ವಿಧಿಸುತ್ತದೆ. ಹೆಣ್ಣು ಏನನ್ನು ಉಡಬೇಕು, ಏನನ್ನು ಉಡಬಾರದು, ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದನ್ನು ಪುರುಷ ಸಮಾಜವೇ ತೀರ್ಮಾನಿಸುತ್ತದೆ. ಇದು ಇಂದಿಗೂ ನಿಂತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಕೆಲವು ವಾಹನಗಳ ಮೇಲೆ ಬರೆದಿರುವ ಬರೆಹವನ್ನು ನೋಡಿದರೆ ನೋವಾಗುತ್ತದೆ. ಮುತ್ತು ಕೊಡುವಳು ಬಂದಾಗ, ತುತ್ತು ಕೊಡುವವಳನ್ನು ಮರೀಬ್ಯಾಡ, ಹೆಣ್ಣನ್ನು ನಂಬಬೇಡ ಎಂದು ಬರೆದಿರುತ್ತಾರೆ. ಇಲ್ಲಿಯೂ ಹೆಣ್ಣಿನ ಶೋಷಣೆ ನಡೆಯುತ್ತಿದೆ. ವೇದ, ಶಾಸ್ತ್ರ, ಆಗಮ ಪುರಾಣಗಳನ್ನು ಓದುವುದು ತೌಡುಕುಟ್ಟುವ ಕೆಲಸವೆಂದರು ವಚನಕಾರರು. ವೇದ ಶಾಸ್ತ್ರ, ಪುರಾಣಗಳಲ್ಲಿ ಹೆಣ್ಣು ಹೇಗಿರಬೇಕೆಂದು ನಿರ್ಧಸುತ್ತವೆ. ಹೆಣ್ಣನ್ನು ಗುಲಾಮಳು, ಚೆಂಚಲೆ ಎಂದು ಇದೇ ಪುರಾಣಗಳು. ಮನುಧರ್ಮಶಾಸ್ತ್ರದ 9ನೇ ಅಧ್ಯಾಯದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಅತ್ಯಂತ ಹೀನಾಯವಾಗಿದೆ ಎಂದರು. ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ, ಹೊನ್ನ ಮಾಯಯೆಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮ ಪ್ರಭು ಹೇಳಿದರು. ಇದನ್ನು ಪುರುಷ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಗಂಡಾಳ್ವಿಕೆ ಹೆಣ್ಣಿನ ಪ್ರತಿಯೊಂದನ್ನು ನಿರ್ವಹಣೆ ಮಾಡುತ್ತದೆ. ಸಿನಿಮಾದಲ್ಲಿ, ಸೀರಿಯಲ್ ನಲ್ಲಿ, ನಾಟಕದಲ್ಲಿ, ಮಾಲ್‌ಗಳಲ್ಲಿ, ಮಹಿಳೆಯನ್ನೇ ಬಳಸಲಾಗುತ್ತಿದೆ. ವದು ಪರೀಕ್ಷೆಯ ನೆಪದಲ್ಲೂ ಹೆಣ್ಣು ಮಕ್ಕಳನ್ನು ಶೋಷಣೆ ಮಾಡಲಾಗುತ್ತಿದೆ. ವರದಕ್ಷಿಣೆಗೆ ಒತ್ತಾಯ ಮಾಡಲಾಗುತ್ತಿದೆ. ಹೀಗಾಗಿ ಈಗ ವರದಕ್ಷಿಣೆ ಸ್ವರೂಪ ಬದಲಾಗಿದೆ ಎಂದರು. ದಿ.ಸೋಮವತಿ ಮತ್ತು ದಿ.ಇಂದಿರಮ್ಮ ಅವರ ಸ್ಮರಣಾರ್ಥ ಸಾಧಕ ಮಹಿಳೆ ದತ್ತಿನಿಧಿ ಪ್ರಶಸ್ತಿಯನ್ನು ವಿಶೇಷ ಚೇತನ ಗಾಯಕಿ ಕುಸುಮಾ ಜೈನ್ ಅವರಿಗೆ ಪ್ರದಾನ ಮಾಡಲಾಯಿತು.ಕಲೇಸಂ ಜಿಲ್ಲಾ ಖಜಾಂಚಿ ಸಿ.ಎಲ್. ಸುನಂದಮ್ಮ ಅಭಿನಂದನಾ ನುಡಿಗಳನ್ನಾಡಿದರು. ರಂಗನಟಿ ವಾಣಿ ಸತೀಶ್ ಕಥಾ ಪ್ರಸ್ತುತಿ ಮಾಡಿದರು. ಇದೇ ವೇಳೆ ಲೇಖಕಿ ಬ.ಹ. ರಮಾಕುಮಾರಿ ಸಂಪಾದಿಸಿರುವ ಬಹುತ್ವದೆಡೆಗೆ ನಮ್ಮ ನಡಿಗೆ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಬಹುಮಾನ ವಿತರಿಸಿದರು. ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಆರ್.ಎಚ್. ಸುಕನ್ಯಾ ಮತ್ತು ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಶ್ವೇತರಾಣಿ ಸ್ವಾಗತಿಸಿದರು. ರಾಣಿ ಚಂದ್ರಶೇಖರ್ ನಿರೂಪಿಸಿದರು. ಮರಿಯಂಬಿ ವಂದಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?