ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸೋಮವಾರಪೇಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಉದ್ಘಾಟಿಸಿದರು. ನಂತರ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 6.5 ಲಕ್ಷ ಸ್ವ ಸಹಾಯ ಗುಂಪುಗಳನ್ನು ರಚಿಸಿ, ಅದರಲ್ಲಿ 55 ಲಕ್ಷ ಜನರು ಸದಸ್ಯತ್ವ ಪಡೆಯುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಲಾಗಿದೆ. ಸಮಾಜ ಕಟ್ಟುವಲ್ಲಿ ಮಹಿಳೆಯರು ಮಂಚೂಣಿಯಲ್ಲಿದ್ದಾರೆ. ಇವರು ತಮ್ಮ ಆರೋಗ್ಯದತ್ತಲೂ ಗಮನ ಹರಿಸಿ, ಪೌಷ್ಟಿಕ ಆಹಾರವನ್ನು ಸೇವಿಸಬೇಕಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರ ನೀಡಿ, ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದರು.
ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರಿಗೆ ಹತ್ತು ಹಲವು ಯೋಜನೆಗಳನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಪುರುಷರಿಗೆ ಸರಿಸಮಾನರಾಗಿ ಜೀವನ ನಡೆಸುತ್ತಿರುವ ಮಹಿಳೆಯರು ಸಂಸ್ಕಾರಯುತ ಜೀವನ ನಡೆಸುವುದರೊಂದಿಗೆ, ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಇದೆ ಎಂದರು. ಪ್ರಸ್ತುತ ದಿನಗಳಲ್ಲಿ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಮಾತನಾಡಿ, ಮಹಿಳೆ ಕುಟುಂಬದ ಸಂರಕ್ಷಣೆಗಾಗಿ ತನ್ನ ಜೀವನವನ್ನು ಸವೆಸುತ್ತಿದ್ದಾಳೆ. ಕಾಲ ಬದಲಾಗಿದೆ. ಆದರೆ, ವ್ಯವಸ್ಥೆ ಹಿಂದಿನಂತೆಯೇ ಮುಂದುವರೆದಿದೆ. ಇಂದು ಸಮುದ್ರದ ಮದ್ಯದಲ್ಲಿ ಮಹಿಳೆಯರ ಜೀವನ ನಿಂತಿದೆ. ನಮ್ಮ ಜೀವನವನ್ನು ಸರಿದೂಗಿಸಲು ನೀರಿನ ದಿಕ್ಕನ್ನು ಬದಲಿಸುವ ಬದಲು, ಹಡಗಿನ ದಿಕ್ಕನ್ನು ಬದಲಿಸಿ ನಮ್ಮ ಜೀವನವನ್ನು ಬದಲಿಸಿಕೊಳ್ಳಬೇಕಿದೆ. ನಮ್ಮ ಹವ್ಯಾಸಗಳನ್ನು ಬದಲಿಸಿಕೊಂದು ಮುನ್ನೆಡೆದಲ್ಲಿ ಮಾತ್ರ ಸಾಧನೆಗೈಯಲು ಸಾಧ್ಯ. ಜೀವನದಲ್ಲಿ ಮಹಿಳೆಯರು ನಮಗೆ ಎಂದು ಸ್ವಲ್ಪ ಸಮಯವನ್ನು ಮೀಸಲಿಟ್ಟು ಮುನ್ನೆಡೆಯಬೇಕೆಂದರು. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಕಿರಣ್ ವಹಿಸಿದ್ದರು. ಜಿಲ್ಲಾ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಠಲ್ ಸಾಲ್ಯಾನ್, ಜನಜಾಗೃತಿ ಸದಸ್ಯರಾದ ಸೋಮೇಶ್, ಸುರೇಶ್ ಹಾಗೂ ಸಂಯುಕ್ತ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.