ಕನ್ನಡಪ್ರಭ ವಾರ್ತೆ ಮೈಸೂರುಮೈಕ್ರೋ ಫೈನಾನ್ಸ್ ಹಾವಳಿಗೆ ಮಹಿಳೆಯರು ಜೋತು ಬೀಳದೆ, ಸರ್ಕಾರಿ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪದ್ಮಾವತಿ ತಿಳಿಸಿದರು.ವಿಜಯನಗರ 2ನೇ ಹಂತದ ಸ್ತ್ರೀಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ನಾವು ಮಾಡಿರುವ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಆಗ ಮಾತ್ರ ನಮ್ಮ ಕೆಲಸಕ್ಕೆ ಪರಿಪೂರ್ಣತೆ ಸಿಗುತ್ತದೆ ಎಂದರು.ನಾನು ಭೇಟಿ ಮಾಡಿದ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ಲೀಡ್ ಬ್ಯಾಂಕ್ ಸಮಸ್ಯೆ ಕಂಡು ಬರುತ್ತಿದ್ದು, 58 ಕೋಟಿ ಸಬ್ಸಿಡಿಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ನಿಗಮದಿಂದ ನೇರವಾಗಿ ಸಾಲ ನೀಡಿ, ವಸೂಲಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ವರ್ಷ ಕಾರ್ಯರೂಪಕ್ಕೆ ಬರುತ್ತದೆ ಎಂದರು. ಮಹಿಳಾ ಅಭಿವೃದ್ಧಿ ನಿಗಮಕ್ಕೆ 95 ಕೋಟಿ ರೂ. ಅನುದಾನ ನೀಡಿದ್ದಾರೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಗುರುತಿನ ಚೀಟಿ ತೋರಿಸಿ ಹೋಗಬಹುದು. ಹೀಗೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ತರಲಾಗಿದೆ ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಮಹಿಳೆಯರಿಗಾಗಿ ಇರಿಸಿರುವ ಅನುದಾನವನ್ನು ನಿಗಧಿತವಾಗಿ ಬಳಸಿಕೊಳ್ಳಲೆಂದು ನಿರ್ಧಿಷ್ಟ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗ ಮೂಲಕ ನೀಡಲಾಗುತ್ತಿದ್ದು, ಇದರಿಂದ ಎಲ್ಲರಿಗೂ ಯೋಜನೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾರೊಬ್ಬರೂ ಯೌವನದಲ್ಲಿಯೇ ಬಿಕ್ಷಾಟನೆಗೆ ಒಳಗಾಗಬಾರದು. ಸರ್ಕಾರದ ಜಾರಿ ಮಾಡಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ನೆರವಿಗಾಗಿ ಸ್ವಯಂ ಸೇವಾ ಸಂಸ್ಥೆ ಸಂಪರ್ಕಸಿ ಸ್ವ-ಉದ್ಯೋಗ ಆರಂಭಿಸಬೇಕು ಎಂದು ಅವರು ಸಲಹೆ ನೀಡಿದರು.11 ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ಯೋಜನೆಯ ಆಭ್ಯರ್ಥಿಗಳ ಅರ್ಜಿಗಳನ್ನು ನಮ್ಮ ನಿಗಮಕ್ಕೆ ತಲುಪಿಸಿದರೆ, ಅದನ್ನು ಸಂಗ್ರಹಿಸಿ ಲೀಡ್ ಬ್ಯಾಂಕ್ ನೊಂದಿಗೆ ಸಭೆ ನಡೆಸಿ ಎಲ್ಲಾ ಅರ್ಜಿದಾರರಿಗೂ ಸಾಲ ದೊರೆಯುವಂತೆ ಮಾಡಲಾಗುವುದು. ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಾಗ ಅದನ್ನು ಅಧಿಕಾರಿಗಳು ಧನಾತ್ಮಕವಾಗಿ ಬಳಸಿಕೊಂಡು, ಪ್ರಾಮಾಣಿಕವಾಗಿ ಜನಸಾಮಾನ್ಯರಿಗಾಗಿ ಕೆಲಸ ಮಾಡಿಕೊಡಬೇಕು ಎಂದು ಅವರು ಸೂಚಿಸಿದರು.ಲೀಡ್ ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಪ್ರದೀಪ್ ಮಾತನಾಡಿ, ಮುಂದಿನ ವಾರದಲ್ಲಿ ತಾಲೂಕು ಮಟ್ಟದ ಪ್ರತಿನಿಧಿಗಳೊಂದಿಗೆ ಸಭೆಯ ಮೂಲಕ ಸಮಾಲೋಚನೆ ನಡೆಸಿ, ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದರು. ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸ್ತ್ರೀಯರಿಗೆ ಸಹಕಾರಿಯಾಗುವಂತಹ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಅದನ್ನು ಮಹಿಳೆಯರು ಸದುಪಯೋಗಪಡಿದಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಹಾಕಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳಾ ಫಲಾನುಭವಿಗಳಿಗೆ ಫಲಾನುಭವಿ ಪತ್ರ ವಿತರಿಸಲಾಯಿತು.ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಬಿ. ಬಸವರಾಜು, ಅಭಿವೃದ್ಧಿ ನಿರೀಕ್ಷಕಿ ಎಚ್.ವಿ. ಜಗದಾಂಭ, ಆನಂದ ಜ್ಯೋತಿ ನೆಟ್ ವರ್ಕ್ ಮಹಾದೇವ, ಆಶೋದಯ ಸಂಸ್ಥೆ ಸುಧಾ, ಹೇಮಲತಾ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, 7 ರೈನ್ ಬೋ ಸಂಸ್ಥೆಯ ಪ್ರಣತಿ ಪ್ರಕಾಶ್ ಮೊದಲಾದವರು ಇದ್ದರು.