ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಇಂದಿಗೂ ವಿಶೇಷ ಸ್ಥಾನಮಾನ, ಗೌರವ ನೀಡುತ್ತ ಬರಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಇಂದಿಗೂ ವಿಶೇಷ ಸ್ಥಾನಮಾನ, ಗೌರವ ನೀಡುತ್ತ ಬರಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಆಂಗ್ಲೋ ಉರ್ದು ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್ ಮತ್ತು ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರ ಮನೆಯಲ್ಲೂ ಮಹಿಳೆಯರು ಇದ್ದಾರೆ, ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ಅವರವರ ಮನೆಯಲ್ಲಿ ಕುಟುಂಬದ ಕಣ್ಣಾಗಿ ತನ್ನ ಜೀವನವನ್ನು ತ್ಯಾಗ ಮಾಡುತ್ತಿದ್ದಾಳೆ. ಅಂತಹ ಸೇವಾ ಮನೋಭಾವನೆಯ ಜೀವಿಗೆ ನಾವು ಎಷ್ಟು ಋಣ ತೀರಿಸಿದರೂ ಸಾಲದು. ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ನೀಡಿದಾಗ ಇಂತಹ ಮಹಿಳಾ ದಿನಾಚರಣೆ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.ಪಿಕೆಕೆ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಗಂಡ ಸಿಗುವ ತನಕ ಶಿಕ್ಷಣ ನೀಡುವ ಪರಿಪಾಠ ಕೈಬಿಟ್ಟು ಅವರಿಗೆ ಉದ್ಯೋಗ ದೊರಕುವ ಮಟ್ಟಿಗೆ ಓದಿಸಬೇಕು. ಗಂಡು ಮತ್ತು ಹೆಣ್ಣಿಗೆ ಸರಿಸಮಾನವಾಗಿ ಶಿಕ್ಷಣ ನೀಡಬೇಕು. ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಇದನ್ನು ಒಂದು ದಿನಕ್ಕೆ ಸೀಮಿತ ಮಾಡದೇ ನಿರಂತರ ಆಚರಣೆ ಮಾಡಬೇಕು. ಮಹಿಳೆಯರು ಮುಂದೆ ಬರಲಿ ಎಂದು ಸರ್ಕಾರ ಸೌಲಭ್ಯ ನೀಡುತ್ತಿದ್ದು ಅದನ್ನು ಬಳಕೆ ಮಾಡಿಕೊಂಡು ಮುಂದೆ ಬರಬೇಕು ಎಂದರು.
ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ಗೀತಾ, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಆಗಮಿಸಿದ್ದರು.
ಪ್ರೇರಣಾದಾಯಕ ಭಾಷಣಕಾರ ಬೆಂಗಳೂರಿನ ಎ.ಎಚ್. ಸಾಗರ ಉಪನ್ಯಾಸ ನೀಡಿದರು. ನಗರಸಭೆ ಸದಸ್ಯರಾದ ಜಯಶ್ರೀ ಪಿಸೆ, ಸುಮಾ ಹುಚಗೊಂಡರ, ಪುಟ್ಟಪ್ಪ ಮರಿಯಮ್ಮನವರ, ಮಾಜಿ ಸದಸ್ಯೆ ರತ್ನಾ ಪುನೀತ್, ರುಕ್ಮಿಣಿ ಸಾವಕಾರ, ಚಂದ್ರಕಲಾ ಬಿಷ್ಟಣ್ಣನವರ, ಶಿರಿನ್ ತಾಜ ಶೇಖ್, ಗಂಗಾಧರ ಬಣಕಾರ, ಇರ್ಫಾನ್ ದಿಡಗೂರ, ನಾಗರಾಜ ಮರಿಯಮ್ಮನವರ ಮತ್ತಿತರರಿದ್ದರು.ಸಮಾರಂಭದ ಅಂಗವಾಗಿ ಮಹಿಳೆಯರು ಛದ್ಮವೇಷ, ಭಜನಾ ಗೀತೆ, ನವದುರ್ಗೆಯವರ ಅವತಾರ ಪ್ರದರ್ಶಿಸಿದರು.