ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಮಠದ ಕೈಲಾಸ ಮಂಟಪದಲ್ಲಿರುವ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಸಂಜೆ ಜರುಗಿತು.ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿ ಮಹಿಳೆಯರು ಪರಸ್ಪರ ಉಡಿ ತುಂಬಿದರು. ಅಪಾರ ಪ್ರಮಾಣದಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಷ್ಟಾರ್ಥಗಳ ಶೀಘ್ರ ಈಡೇರಿಕೆಗಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಈ ಮೂಲಕ ಹರಕೆ ಮಾಡಿಕೊಂಡರು. ನಗರದ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು ಹಾಗೂ ಕೊಪ್ಪಳ ನಗರದ ಹಾಗೂ ಸುತ್ತಲಿನ ಗ್ರಾಮದ ಮಹಿಳೆಯರು ಅಪಾರ ಪ್ರಮಾಣದಲ್ಲಿ ಭಾಗವಹಿಸಿದ್ದರು.ಸಂಭ್ರಮದ ಲಘು ರಥೋತ್ಸವ:
ನಗರದ ಗವಿಮಠದಲ್ಲಿ ಲಘು ರಥೋತ್ಸವ ಸಂಭ್ರಮದಿಂದ ಜರುಗಿತು.ಗವಿಮಠದ ಆವರಣದಲ್ಲಿ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು. ಭಕ್ತಿಯಿಂದ ಲಘು ರಥೋತ್ಸವ ಜರುಗಿತು. ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದವು. ಗವಿಸಿದ್ಧೇಶ್ವರ ಜಯಘೋಷ ಮೊಳಗಿದವು. ಅಪಾರ ಭಕ್ತರಿದ್ದರು.
ವಿದ್ಯಾರ್ಥಿಗಳಿಂದ ಸಂಗೀತ:ಗವಿಮಠದ ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹೂವಿನಹಡಗಲಿಯ ಡಾ. ಹಿರಿಶಾಂತವೀರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಚಿಕ್ಕಮ್ಯಾಗೇರಿಯ ಶ್ರೀ ಗುರು ಶಾಂತವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಬೆಂಗಳೂರಿನ ಶ್ರೀದೇವಿ ಪಾಟೀಲ್, ಅರ್ಪಿತ ಮತ್ತು ಅರ್ಚನ ಕುಂಬಾರ್, ಅಭಿನಯ, ಬಳ್ಳಾರಿಯ ಭೂಮಿಕ ಜೆ.ಎಂ., ಶಿವಪುರದ ಲೇಖನಾ ಕಲ್ಗುಡಿ, ಹರಪನಹಳ್ಳಿಯ ಅಮೃತ, ಹಿರೇಸಿಂದೋಗಿಯ ಸುದೀಕ್ಷಾ ಯರಾಸಿ, ಹೊಗರನಾಳದ ಸುಕೃತ ಇವರಿಂದ ಜರುಗಿದ ಭರತನಾಟ್ಯ ಜರುಗಿತು. ಹುಬ್ಬಳ್ಳಿಯ ಅವನೇಶ ನೀಲಗುಂದ ಇವರಿಂದ ಅಭಿನಯ, ಕೊಪ್ಪಳದ ವಿಎಂಪಿ ಇವರಿಂದ ಸುಗಮ ಸಂಗೀತ, ಸೊಲ್ಲಾಪುರದ ಶಿವಪೂಜಿ ಇವರಿಂದ ಗಾಯನ ಜರುಗಿತು. ಸುಗಮ ಸಂಗೀತ ಕಾರ್ಯಕ್ರಮಕ್ಕೆ ಸಮರ್ಥ್ ಮಂಗಳೂರು ಹಾಗೂ ವಿನಯ್ ಶಿರೂರಮಠ ಹಾರ್ಮೋನಿಯಂ, ಶ್ರೀನಿವಾಸ್ ಜೋಶಿ, ಮಹಮ್ಮದ್ ರಿಜ್ವಾನ್ ತಬಲಾ, ಕೃಷ್ಣ ಸುರಮಾರ ತಾಳ ಸಾಥ್ ನೀಡಿದರು.