ಮಹಿಳೆ ಹೋರಾಟದ ಪರಂಪರೆ ಎತ್ತಿ ಹಿಡಿಯಬೇಕು

KannadaprabhaNewsNetwork | Published : Mar 16, 2025 1:47 AM

ಸಾರಾಂಶ

ಕೇಂದ್ರ ಎನ್.ಡಿ.ಎ ಸರ್ಕಾರ ಸರಕುಗಳು ಮತ್ತು ಅಗತ್ಯ ಸೇವೆಗಳ ಮೇಲಿನ ಜಿ.ಎಸ್.ಟಿ. ಅಗತ್ಯ ಔಷಧಗಳ ಬೆಲೆಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲೆ ನಿಯಂತ್ರಣ ರದ್ದಾಗಿರುವುದು ದೇಶದ ಸಾಮಾನ್ಯ ಜನರ ದೈನಂದಿನ ವೆಚ್ಚಗಳನ್ನು ಹೆಚ್ಚಿಸಿವೆ. ಕೃಷಿ ಬಿಕ್ಕಟ್ಟು ತೀವ್ರವಾಗಿರುವುದರಿಂದ ಕೆಲಸ ಅರಸಿ ವಲಸೆ ಹೋಗುವವರ ಪ್ರಮಾಣ ಜಾಸ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಿಳಾ ಸಮಾನತೆ, ಶೋಷಣೆ, ತಾರತಮ್ಯ ಮತ್ತು ಹಿಂಸೆ ಮುಕ್ತ ಜೀವನಕ್ಕಾಗಿ ಹಿಂದಿನಿಂದಲೂ ಹೋರಾಟಗಳು ನಡೆಯುತ್ತಿವೆ. ಪ್ರತಿ ಮಹಿಳೆಯೂ ಹೋರಾಟದ ಪರಂಪರೆಯನ್ನು ಎತ್ತಿ ಹಿಡಿಯಬೇಕು ಮತ್ತು ಶೋಷಣೆಯ ವ್ಯವಸ್ಥೆಯನ್ನು ಬದಲಿಸಲು ಸಂಘಟಿತಳಾಗಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿಯರ ಸಂಘಟನೆಯ ರಾಜ್ಶಾಧ್ಯಕ್ಷೆ ಡಿ.ಎಂ.ರತ್ನಮ್ಮ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಅಂಗನವಾಡಿ ನೌಕರರ ಸಂಘ(ಸಿಐಟಿಯು ಮಾನ್ಯತೆ) ವತಿಯಿಂದ ದುಡಿಯುವ ಮಹಿಳೆಯರ 117ನೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ - 2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯ ಹಕ್ಕುಗಳ ಮೇಲೆ ದಾಳಿ

ಅಂಗನವಾಡಿ ನೌಕರರ ಸಂಗದ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ ಮಾತನಾಡಿ, ದೇಶದಲ್ಲಿ ಮಹಿಳೆಯರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ ಈ ವರ್ಷದ ಮಹಿಳಾ ದಿನಾಚರಣೆಯು ಆಚರಿಸಲ್ಪಡುತ್ತಿದೆ. ಮಹಿಳೆಯರ ಹಕ್ಕುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ತಾರತಮ್ಯ ಅಧಿಕವಾಗುತ್ತಿದೆ. ಸಾಮಾನ್ಯ ಜನರು ಅದರಲ್ಲೂ ದುಡಿಯುವ ಮಹಿಳೆಯರ ಮೇಲೆ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಗಧಾ ಪ್ರಹಾರ ಆಗುತ್ತಿದೆ. ಇದು ಎಲ್ಲಾ ಜನರ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ ಎಂದರು.

ಕೇಂದ್ರ ಎನ್.ಡಿ.ಎ ಸರ್ಕಾರ ಸರಕುಗಳು ಮತ್ತು ಅಗತ್ಯ ಸೇವೆಗಳ ಮೇಲಿನ ಜಿ.ಎಸ್.ಟಿ. ಅಗತ್ಯ ಔಷಧಗಳ ಬೆಲೆಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲೆ ನಿಯಂತ್ರಣ ರದ್ದಾಗಿರುವುದು ದೇಶದ ಸಾಮಾನ್ಯ ಜನರ ದೈನಂದಿನ ವೆಚ್ಚಗಳನ್ನು ಹೆಚ್ಚಿಸಿವೆ. ಕೃಷಿ ಬಿಕ್ಕಟ್ಟು ತೀವ್ರವಾಗಿರುವುದರಿಂದ ಕೆಲಸ ಅರಸಿ ವಲಸೆ ಹೋಗುವವರ ಪ್ರಮಾಣ ಜಾಸ್ತಿಯಾಗಿದೆ ಎಂದರು.

ಸಾಲದ ಸುಳಿಯಲ್ಲಿ ಮಹಿಳೆ

ಪುರುಷಕ ವಲಸೆಯಿಂದಾಗಿ ಗ್ರಾಮೀಣ ಮಹಿಳೆಯರು ಗ್ರಾಮಗಳಲ್ಲೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರೇ ಮನೆಯ ಖರ್ಚುಗಳನ್ನು ಅನಿವಾರ್ಯವಾಗಿ ನಿರ್ವಹಿಸಲೇ ಬೇಕಾದ ಪರಿಸ್ಥಿತಿಗೆ ಉಂಟಾಗಿದೆ. ಮಹಿಳೆಯರು ಸಾಲದ ಸುಳಿಗೆ ಸಿಲುಕಿದ್ದಾರೆ. ಖಾಸಗಿ ಕಿರು ಹಣಕಾಸು ಸಂಸ್ಥೆಗಳ ಬಲವಂತವು ಮಹಿಳೆಯರನ್ನು ದೊಡ್ಡ ಮೊತ್ತಕ್ಕಾಗಿ ಒತ್ತಾಯಿಸುತ್ತಿದೆ. ಅದರ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗವನ್ನು ಮರೆಮಾಚುವುದಕ್ಕಾಗಿ ಸರ್ಕಾರಗಳು ತಪ್ಪು ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ. ಸ್ವಂತ ಮನೆಯ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರನ್ನೂ ಕೂಡಾ ಉದ್ಯೋಗಿಗಳು ಎಂದು ಬಿಂಬಿಸಲಾಗುತ್ತಿದೆ ಎಂದರು.

ಶೇ.70ರಷ್ಟು ನಿರದ್ಯೋಗಿಗಳು

ಕೆನರಾ ಬ್ಶಾಂಕ್ ತರಬೇತಿ ಸಂಯೋಜಕಿ ಮಧುಪ್ರಿಯಾ ಮಾತನಾಡಿ, ಶೇ70 ರಷ್ಟು ಮಹಿಳೆಯರು ನಿರುದ್ಯೋಗವನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರು ಪುರಷರಿಗಿಂತ ಶೇ. 40 ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಶೇ.31 ರಷ್ಟು ಮಹಿಳೆಯರಿಗೆ ಮಾತ್ರವೇ ಹೆರಿಗೆ ಭತ್ಯೆ ಸಿಗುತ್ತದೆ.ಬಹು ಸಂಖ್ಯೆಯಲ್ಲಿ ಸರ್ಕಾರಿ ಯೋಜನಾ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಿರುವ ಅಸಂಘಟಿತ ಯೋಜನಾ ಕಾರ್ಮಿಕರು, ಕೃಷಿ, ಗುತ್ತಿಗೆ-ಹೊರಗುತ್ತಿಗೆ, ಖಾಸಗಿ ನರ್ಸಿಂಗ್ ಹೊಂ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಣ್ಣ ಕಾರ್ಖಾನೆಗಳು ಮುಂತಾದಡೆ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ಭತ್ಯೆ ಸೌಲಭ್ಯ ಕನಸಾಗಿದೆ ಎಂದು ಹೇಳಿದರು.

ವರ್ಕ್‌ ಪ್ರಂ ಹೋಮ್‌ ಹೆಸರಲ್ಲಿ ಶೋಷಣೆ

ಐಟಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಮಾನವೀಯವಾಗಿ ವಿಸ್ತೃತಗೊಂಡಿರುವ ಕೆಲಸದ ಒತ್ತಡಗಳಿಗೆ ಮಹಿಳೆಯರು ಬಲಿಯಾಗಿದ್ದಾರೆ. ವರ್ಕ್ ಪ್ರಮ್ ಹೋಂ ನಂತಹ ಹಲವು ನಾಮ ಬಳಸಿ ದಿನದ 24 ಗಂಟೆಯೂ ಸೇವೆಗೆ ಲಭ್ಯವಾಗುವ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಈ ವೇಳೆ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ರತ್ನಮ್ಮ,ಮಂಜುಳ,ರಾಧ, ಉಮಾ, ಮುನಿರತ್ನ, ಶಾಂತಮ್ಮ, ಬಾಗ್ಶಮ್ಮ, ಪದ್ಮ, ಜಯಮಂಗಲ,ಗೀತಾ ಮತ್ತಿತರರು ಇದ್ದರು.

Share this article