ಮಹಿಳೆಯರಿಗೆ ಸೈಬರ್‌ ಕ್ರೈಂ ಅರಿವು ಅಗತ್ಯ: ರಶ್ಮಿ

KannadaprabhaNewsNetwork | Published : Mar 11, 2025 12:48 AM

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಪುತ್ತೂರು ಪುರಭವನದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಸ್ತುತ ಸೈಬರ್ ಪ್ರಕರಣಗಳಲ್ಲಿ ಮಹಿಳೆಯರು ಹೆಚ್ಚು ವಂಚನೆಗೊಳಲಾಗುತ್ತಿದ್ದು, ಸೈಬರ್ ಕ್ರೈಂ ಕುರಿತು ಅವರಿಗೆ ಸರಿಯಾದ ಮಾಹಿತಿ ದೊರಕಬೇಕಾಗಿದೆ. ಜೊತೆಗೆ ಮಹಿಳೆಯರಿಗೆ ಸಮರ್ಪಕ ಮಾಹಿತಿ, ಅರಿವು ಮುಡಿಸಿ ಸಮಾಜದಲ್ಲಿ ಬೆರೆತು ಸಾಧನೆ ಮಾಡುವಂತೆ ಬೆಂಬಲ, ಪ್ರೋತ್ಸಾಹ ನೀಡಬೇಕಾಗಿದೆ. ಹೀಗಾದಾಗ ಮಹಿಳಾ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ನಗರಸಭೆ, ತಾಲೂಕು ಆಡಳಿತ ಕಚೇರಿ, ತಾ.ಪಂ. ತಾಲೂಕು ಸಂಜೀವಿನಿ ಒಕ್ಕೂಟ, ಸುಗ್ರಾಮ ಜಾಗೃತಿ ವೇದಿಕೆಯ ಸಹಯೋಗದಲ್ಲಿ ಪುತ್ತೂರು ಪುರಭವನದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಈಗ ಮಹಿಳೆಯರಿಗೆ ಪರ್ವ ಕಾಲ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಮಹಿಳೆಯ ಪ್ರಗತಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಪುತ್ತೂರು ತಾಲೂಕಿನ ೩೮ ಸಾವಿರ ಕುಟುಂಬಗಳಿಗೆ ರು. ೧೦೨ ಕೋಟಿ ಹಣ ಜಮೆ ಆಗಿದೆ. ಶಕ್ತಿ ಯೋಜನೆ ಮೂಲಕ ೧.೧೮ ಕೋಟಿ ಮಂದಿಗೆ ರು. ೫೪ ಕೋಟಿಯಷ್ಟು ಪ್ರಯೋಜನವಾಗಿದೆ ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ೫೦ ಶೇ. ಮೀಸಲಾತಿಯಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ೬೫ ಶೇ. ಮಹಿಳಾ ಫಲಾನುಭವಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಲೇಡಿಗೋಶನ್ ಆಸ್ಪತ್ರೆಯ ಪ್ರಿಯಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಸುಗ್ರಾಮದ ಅಧ್ಯಕ್ಷೆ ಮಾಲತಿ, ಡೇ ನಲ್ಮ್ ತಾಲೂಕು ಸಂಯೋಜಕ ಜಗತ್, ಮಾಜಿ ಒಂಬುಡ್ಸ್‌ಮೆನ್‌ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣಮೂಲ್ಯ ಇದ್ದರು.

ಪುತ್ತೂರು ಸಾಂತ್ವನ ಕೇಂದ್ರದ ಸಿಬಂದಿ ಆಶಯಗೀತೆ ಹಾಡಿದರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ಕೆ. ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಕಾರ್ಯಕರ್ತರಾದ ಅಶ್ವಿನಿ ಎಂ., ಬಿಂದು ಕುಮಾರಿ, ನಿತಿನ್ ಕುಮಾರ್ ಕೆ. ಸಹಕರಿಸಿದರು.

Share this article