ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲ ಚೆನ್ನಪ್ಪ । ಮಾಸಿಕ ಸಂತೆಕನ್ನಡಪ್ರಭ ವಾರ್ತೆ ಬೇಲೂರು
ಮಹಿಳೆಯರ ಚಟುವಟಿಕೆಗಳಿಗೆ ಸಾರ್ವಜನಿಕರು ಪ್ರೋತ್ಸಾಹ, ಸಹಕಾರ ನೀಡಬೇಕು. ಎಲ್ಲಾ ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗ ಪಡಿದುಕೊಂಡು ಸ್ವಾವಲಂಬಿಗಳಾಗಿ ಆರ್ಥಿಕತೆಯಲ್ಲಿ ಸಬಲರಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲ ಚೆನ್ನಪ್ಪ ಹೇಳಿದರು.ತಾಲೂಕಿನ ಅರೇಹಳ್ಳಿ ಪಟ್ಟಣದ ಸಂತೆ ಮೈದಾನದಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿದ್ದ ಮಾಸಿಕ ಸಂತೆಯಲ್ಲಿ ಮಾತನಾಡಿದರು.
‘ಇಂತಹ ಸಂತೆಗಳಲ್ಲಿ ಹೆಚ್ಚಿನ ಸಂಘಗಳು ಪಾಲ್ಗೊಳ್ಳಬೇಕು. ಗುಣಮಟ್ಟದ ಹಾಗೂ ಪರಿಶುದ್ಧವಾದ ಉತ್ಪನ್ನ ತಯಾರಿಸಬೇಕು. ಉತ್ಪನ್ನಗಳ ಬಗ್ಗೆ ಪ್ರಚಾರವನ್ನೂ ಮಾಡಬೇಕು’ ಎಂದು ಸಲಹೆ ನೀಡಿದರು.ಈ ಮಾಸಿಕ ಸಂತೆಯಲ್ಲಿ ತಾಲೂಕಿನ 21 ಗ್ರಾಮ ಪಂಚಾಯಿತಿಯ ಸುಮಾರು 70 ಸ್ವಸಹಾಯ ಸಂಘಗಳು ಭಾಗಿಯಾಗಿದ್ದವು. ಅವುಗಳಲ್ಲಿ ಲಕ್ಕುಂದ, ಟಿ.ಡಿ. ಹಳ್ಳಿ, ಮಲಸಾವರ ಹಾಗೂ ಅರೇಹಳ್ಳಿ ಪಂಚಾಯಿತಿಯ ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಮನೆಯಲ್ಲಿಯೇ ತಯಾರಿಸಿದ ವಿವಿದ ಬಗೆಯ ಉಪ್ಪಿನಕಾಯಿ, ಹಪ್ಪಲ, ಖಾರದ ಪುಡಿ, ಫಿನೈಲ್, ಸಿಹಿ ತಿಂಡಿ ಸೇರಿದಂತೆ ಇನ್ನಿತರ ಗೃಹ ಬಳಕೆ ವಸ್ತುಗಳನ್ನು 31 ಸ್ಟಾಲ್ ಗಳ ಮೂಲಕ ಮಾರಾಟ ಮಾಡಿದರು.
ಸರ್ಕಾರವು ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿಗಾಗಿ ವಿವಿದ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಕಿರುಸಾಲ ನೀಡುತ್ತಿದ್ದು ಇದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು, ಸಾಲ ನೀಡುತ್ತವೆ ಎಂದರೆ ಒಡಿ ಬರುವ ಮಹಿಳೆಯರು, ಅದೇ ಸಾಲ ಪಡೆದು ಅದರಿಂದ ಸ್ಟಾಲ್‌ಗಳ ಮೂಲಕ ಸಂತೆಯಲ್ಲಿ ವ್ಯವಹಾರ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಎಂದರೆ ಹಿಂಜರಿದು ಬಹುಪಾಲು ಸಂಘದ ಸದಸ್ಯರು ಬಾಗವಹಿಸಿಲ್ಲ, ಮುಂದಿನ ದಿನಗಳಲ್ಲಿ ಎಲ್ಲರೂ ಸದೃಢರಾಗಿ ಇಂತಹ ಕಾರ್ಯಕ್ರಮಲ್ಲಿ ಭಾಗವಹಿಸಬೇಕು ಎಂದು ಮಲೆನಾಡು ಮಲ್ಲಿಗೆ ಒಕ್ಕೂಟದ ಅಧ್ಯಕ್ಷೆ ರೇಣುಕಾ ತಿಳಿಸಿದರು.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ತಾಲೂಕು ವ್ಯವಸ್ಥಾಪಕಿ ದಾಕ್ಷಾಯಿಣಿ, ಕಾರ್ಯಕ್ರಮ ವ್ಯವಸ್ಥಾಪಕಿ ಪುಣ್ಯ, ಮಲೆನಾಡು ಮಲ್ಲಿಗೆ ಒಕ್ಕೂಟದ ಕಾರ್ಯದರ್ಶಿ ಯಾಸ್ಮಿನ್, ಉಪಾಧ್ಯಕ್ಷೆ ಮಂಜುಳಾ, ಎಂ.ಬಿ.ಕೆ.ಕವಿತಾ, ಪಂಚಾಯಿತಿ ಲೆಕ್ಕಾಧಿಕಾರಿ ಚಿಕ್ಕಯ್ಯ, ತಾಲೂಕಿನ ವಿವಿದ ಸಂಘದ ಪದಾಧಿಕಾರಿಗಳು, ಸದಸ್ಯರು, ಪಂಚಾಯಿತಿ ಸಿಬ್ಬಂದಿ ಇದ್ದರು. ಅರೇಹಳ್ಳಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಮಾಸಿಕ ಸಂತೆ ಉದ್ಘಾಟಿಸಲಾಯಿತು.