-ವಜ್ಜಲ್ ಗ್ರಾಮದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಮಹಿಳೆಯರ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಹುಣಸಗಿ
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ವಜ್ಜಲ ಗ್ರಾಮದ ಮುಖ್ಯರಸ್ತೆಯಿಂದ ಕೊಂಡಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯು ಕೆಸರು ಗದ್ದೆಯಂತಾಗಿದೆ. ಕೂಡಲೇ ಅಧಿಕಾರಿಗಳು ರಸ್ತೆ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ವಾರ್ಡ್ ನ ಮಹಿಳೆಯರು ಹಾಗೂ ಜನರು ಆಗ್ರಹಿಸಿದರು. ಈ ಕುರಿತು ಗ್ರಾಮದ ರಸ್ತೆಯ ಗುಂಡಿಗಳಲ್ಲಿ ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ 10-15 ವರ್ಷಗಳ ಹಿಂದೆ ಈ ರಸ್ತೆ ನಿರ್ಮಿಸಲಾಗಿದೆ. ಬಳಿಕ ರಸ್ತೆ ದುರಸ್ತಿಗೆ ಆದ್ಯತೆ ನೀಡಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ನಿತ್ಯವು ನರಕ ಯಾತನೆ ಅನುಭವಿಸುವಂತಾಗಿದೆ. ರಸ್ತೆ ಪಕ್ಕದಲ್ಲಿ ಚರಂಡಿ ಇಲ್ಲದಿದ್ದರಿಂದ ಬಚ್ಚಲು ನೀರು, ನಲ್ಲಿ ನೀರು ರಸ್ತೆಯಲ್ಲಿಯೇ ಹರಿಯುತ್ತಿವೆ. ಇದರಿಂದಾಗಿ ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದರು.
ಒಂದು ತಿಂಗಳೊಳಗೆ ಈ ರಸ್ತೆ ಕಾಮಗಾರಿಗೆ ಒತ್ತು ನೀಡಬೇಕು. ಇಲ್ಲದಿದ್ದಲ್ಲಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಯುವಕ ಸಿದ್ದು ಗುರಡ್ಡಿ ಎಚ್ಚರಿಕೆ ನೀಡಿದರು. ಶಬನಾ ಆಲಗೂರು ಮತ್ತು ನೀಲಮ್ಮ ಬಾಕ್ಲಿ ಮಾತನಾಡಿ, ರಸ್ತೆ ಸಂಪೂರ್ಣ ತಗ್ಗು-ಗುಂಡಿಗಳಿಂದ ಆವರಿಸಿದ್ದು, ದ್ವಿಚಕ್ರ ವಾಹನ ರಸ್ತೆಯಲ್ಲಿ ಸಂಚರಿಸಿದರೆ, ರಸ್ತೆಯಲ್ಲಿನ ಮಲೀನ ನೀರು ಪಾದಚಾರಿಗಳಿಗೆ ಸಿಡಿಯುತ್ತವೆ. ಅಷ್ಟೊಂದು ರಸ್ತೆ ಹದೆಗೆಟ್ಟಿದೆ. ತಕ್ಷಣ ಸಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ವಹಿಸುವಂತೆ ಆಗ್ರಹಿಸಿದರು.ನಿಂಗಮ್ಮ ಮಲಕಾಪುರ, ಶರಣಮ್ಮ ಮಲಕಾಪುರ, ಚಂದಮ್ಮ ಕನ್ನೆಳ್ಳಿ, ನೀಲಮ್ಮ ಕಾಮನಟಗಿ, ಮಾಳಿಂಗರಾಯ ಮಲ್ಕಾಪುರ, ನಿಂಗು ದೊರೆ, ಶಿವರಾಜ, ಮೌನೇಶ ಇದ್ದರು.
----ಫೋಟೊ: ಹುಣಸಗಿ ವಜ್ಜಲ್ ಗ್ರಾಮದ ಕೊಂಡಮ್ಮ ದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮಹಿಳೆಯರು ಹಾಗೂ ಯುವಕರು ಭತ್ತ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
2ವೈಡಿಆರ್6