ಶಿಗ್ಗಾಂವಿ: ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನತೆ ಹಕ್ಕು ಹಾಗೂ ವಿಶೇಷ ಕಾನೂನುಗಳನ್ನು ನೀಡಲಾಗಿದೆ. ಮಹಿಳೆಯರು ಕುಟುಂಬದ ಜವಾಬ್ದಾರಿಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಶಿಗ್ಗಾಂವಿ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶ ಸುನೀಲ ಎಸ್. ತಳವಾರ ಹೇಳಿದರು.
ಶಿಗ್ಗಾಂವಿ ಜೆಎಂಎಫ್‌ಸಿ ನ್ಯಾಯಾಧೀಶ ಅಶ್ವಿನಿ ಚಂದ್ರಕಾಂತ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನ ಇದೆ. ಮಹಿಳೆಯರಿಗೆ ಸಮಾನತೆ ಹಾಗೂ ಶಿಕ್ಷಣ ನೀಡುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಹೇಳಿದರು.
ಪ್ಯಾನಲ್ ವಕೀಲರಾದ ಚೆನ್ನಮ್ಮ ಬಡ್ಡಿ ಅವರು, ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಕುರಿತು ಮಾಹಿತಿ ನೀಡಿದರು. ವಕೀಲರಾದ ವಸಂತಾ ಬಾಗೂರ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು, ಹೆಣ್ಣಿಲ್ಲದ ಕುಟುಂಬದ ಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯ. ಸಮಾಜದ ಸುಧಾರಣೆ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಹೇಳಿದರು.ಶಿಗ್ಗಾಂವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಆರ್. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗೆ ಇರುವ ಯೋಜನೆಗಳು, ಮಕ್ಕಳ ಹಕ್ಕುಗಳು, ಹೆಣ್ಣುಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ, ಮಹಿಳಾ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು.
ಮೇಲ್ವಿಚಾರಕಿಯರಾದ ಶೈಲಜಾ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಪಾಟೀಲ ಪ್ರಾರ್ಥಿಸಿದರು. ದೀಪಾ ಭಜಂತ್ರಿ ಸ್ವಾಗತಿಸಿದರು. ಜಯಶ್ರೀ ಕಾವಲಕೊಪ್ಪ ವಂದಿಸಿದರು. ಲಕ್ಷ್ಮೀಬಾಯಿ ಬಗಾಡೆ ಕಾರ್ಯಕ್ರಮ ನಿರೂಪಿಸಿದರು.