ಮಹಿಳಾ ಸಂಘಗಳು ಸಾಲ ಮರುಪಾವತಿಸಬೇಕು

KannadaprabhaNewsNetwork |  
Published : Sep 23, 2025, 01:03 AM IST
22ಕೆಬಿ್ಪಿಟಿ.2.ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ವಿಎಸ್‌ಎಸ್‌ಎನ್ ಸಂಘದ ಸಭೆಯಲ್ಲಿ ಮಾತನಾಡುತ್ತಿರುವ ಅಧ್ಯಕ್ಷ ಗೋವಿಂದರಾಜು. | Kannada Prabha

ಸಾರಾಂಶ

ಸರ್ಕಾರದಿಂದ ಸಾಲ ಮನ್ನಾ ಆಗುತ್ತದೆ ಎಂಬ ಉದ್ದೇಶವನ್ನು ಹೊಂದಿರುವಂತಹ ಕೆಲವರು ಸಾಲವನ್ನು ಮರುಪಾವತಿ ಮಾಡುತ್ತಿಲ್ಲ. ಜೊತೆಗೆ ಡಿಸಿಸಿ ಬ್ಯಾಂಕ್ ನಿಂದ ಇತ್ತೀಚೆಗೆ ಸಾಲವನ್ನು ನೀಡದ ಪರಿಣಾಮ ಮುಂದೆ ಸಾಲಗಳು ವಿತರಣೆ ಆಗುವುದಿಲ್ಲ ಎಂಬ ಉದ್ದೇಶದಿಂದಲೂ ಸಾಲ ಮರುಪಾವತಿ ಮಾಡಲು ಮಹಿಳೆಯರು ಮುಂದಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಹಿಳಾ ಸಂಘಗಳಿಗೆ ನೀಡಿರುವ ಸಾಲವನ್ನು ಸದಸ್ಯರು ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಾಮಸಮುದ್ರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಎಂ.ಗೋವಿಂದರಾಜುಲು ಮನವಿ ಮಾಡಿದರು. ತಾಲೂಕಿನ ಕಾಮಸಮುದ್ರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿ, ಗಡಿಭಾಗದ ಗ್ರಾಮಗಳ ಮಹಿಳೆಯರು ಆರ್ಥಿಕವಾಗಿ ಸಧೃಡರಾಗಬೇಕು ಎಂಬ ಉದ್ದೇಶದಿಂದ ತಾಲೂಕಿನ ೧೪ ಸಂಘಗಳ ಪೈಕಿ ಕಾಮಸಮುದ್ರ ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ವಿತರಣೆ ಮಾಡಲಾಗಿದೆ ಎಂದರು.

₹ ೪.೫೫ ಕೋಟಿ ಸಾಲ ಬಾಕಿ

ನೀಡಿರುವಂತಹ ಸಾಲದಲ್ಲಿ ಇನ್ನೂ ಸಹ ೪.೫೫ ಕೋಟಿ ರೂಗಳು ಮರುಪಾವತಿ ಬಾಕಿ ಇದೆ. ಜೊತೆಗೆ ರೈತರ ಕೃಷಿ ಸಾಲಕ್ಕೆ ನೀಡಿರುವ ೨.೪೯ ಕೋಟಿ ಸಹ ಬಾಕಿ ಇದೆ. ಇದರಿಂದಾಗಿ ಸಂಘದ ಅಭಿವೃದ್ದಿ ಕುಂಠಿತಗೊಂಡಿದ್ದು, ಆದಾಯವೂ ಕಡಿಮೆಯಾಗಿದೆ. ಸರ್ಕಾರದಿಂದ ಸಾಲ ಮನ್ನಾ ಆಗುತ್ತದೆ ಎಂಬ ಉದ್ದೇಶವನ್ನು ಹೊಂದಿರುವಂತಹ ಕೆಲವರು ಸಾಲವನ್ನು ಮರುಪಾವತಿ ಮಾಡುತ್ತಿಲ್ಲ. ಜೊತೆಗೆ ಡಿಸಿಸಿ ಬ್ಯಾಂಕ್ ನಿಂದ ಇತ್ತೀಚೆಗೆ ಸಾಲವನ್ನು ನೀಡದ ಪರಿಣಾಮ ಮುಂದೆ ಸಾಲಗಳು ವಿತರಣೆ ಆಗುವುದಿಲ್ಲ ಎಂಬ ಉದ್ದೇಶದಿಂದಲೂ ಸಾಲ ಮರುಪಾವತಿ ಮಾಡಲು ಮಹಿಳೆಯರು ಮುಂದಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಆದರೆ ಯಾವುದೇ ಕಾರಣಕ್ಕೂ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಗಳು ಇಲ್ಲ. ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರು ನೇಮಕವಾದರೆ ಸಾಲಗಳು ದೊರೆಯಲಿದ್ದು, ಬಾಕಿ ಉಳಿಸಿಕೊಂಡಿರುವಂತಹ ಹಣವನ್ನು ಮರುಪಾವತಿ ಮಾಡಿದರೆ ಸಂಘ ಅಭಿವೃದ್ದಿ ಆಗುತ್ತದೆ ಅದರೊಟ್ಟಿಗೆ ಇತರರಿಗೂ ಸಾಲವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಶೀಘ್ರದಲ್ಲೇ ಅಧ್ಯಕ್ಷರ ನೇಮಕ

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್ ರಂಗನಾಥಾಚಾರಿ ಮಾತನಾಡಿ, ಸಂಘದಲ್ಲಿ ಈ ವರ್ಷ ವ್ಯವಹಾರ ಕಡಿಮೆಯಾದ ಕಾರಣ ಕೇವಲ ೧.೫೬ ಲಕ್ಷ ಮಾತ್ರ ಲಾಭ ಬಂದಿದೆ. ಡಿಸಿಸಿ ಬ್ಯಾಂಕಿನ ಚುನಾವಣೆ ನಡೆದಿದ್ದು, ಅಧ್ಯಕ್ಷರ ನೇಮಕ ಆಗದ ಕಾರಣ ಸಂಘಗಳಿಗೆ ಮತ್ತು ರೈತರಿಗೆ ಸಾಲವನ್ನು ನೀಡಲು ಸಾಧ್ಯವಾಗಲಿಲ್ಲ. ಆದಷ್ಟು ಬೇಗ ಅಧ್ಯಕ್ಷರನ್ನು ನೇಮಕ ಮಾಡಿ ಸಾಲವನ್ನು ನೀಡಲಾಗುತ್ತದೆ. ಅಲ್ಲಿಯವರೆಗೂ ಸಂಘದಿಂದ ಸಾಲ ನೀಡಿರುವ ಹಣದ ಪೈಕಿ ಸುಮಾರು ೭ ಕೋಟಿ ರುಗಳ ಸಾಲ ಹಣ ಜನರಲ್ಲಿ ಇರುವುದರಿಂದ ಅದನ್ನು ಪಾವತಿ ಮಾಡಿಕೊಂಡು ಸಾಲವನ್ನು ವಿತರಣೆ ಮಾಡಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಬುಗೌಡ, ಟಿವಿ ವೆಂಕಟೇಶ್, ಜಿಎಂ.ಶ್ರೀನಿವಾಸ್, ಸಿ.ವೆಂಕಟೇಶ್, ವಿ.ನಾರಾಯಣಸ್ವಾಮಿ, ಲಕ್ಷ್ಮಮ್ಮ, ನಟರಾಜ್ ಮಾಜಿ ಅಧ್ಯಕ್ಷರಾದ ಜೆಸಿಬಿ ನಾರಾಯಣಪ್ಪ, ತಿಪ್ಪಾರೆಡ್ಡಿ, ಪ್ರಭಾರಿ ಕಾರ್ಯದರ್ಶಿ ವಿ.ಶ್ರೀನಿವಾಸ್, ಕೋದಂಡರಾಮಯ್ಯ ಮುಂತಾದವರು ಹಾಜರಿದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ