ಲೈಂಗಿಕ ಕಿರುಕುಳ, ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಫಿಲಂ ಚೇಂಬರ್‌ಗೆ ಮಹಿಳಾ ಆಯೋಗ ಪತ್ರ

KannadaprabhaNewsNetwork |  
Published : Sep 20, 2024, 01:36 AM ISTUpdated : Sep 20, 2024, 08:09 AM IST
Film Theater

ಸಾರಾಂಶ

ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಸಭೆ ನಡೆಸಿದ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗವು, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಪತ್ರ ಬರೆದು ಮಂಡಳಿಯಿಂದ ಮಾಹಿತಿ ಕೋರಿದೆ.

 ಬೆಂಗಳೂರು :  ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಸಭೆ ನಡೆಸಿದ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗವು, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಪತ್ರ ಬರೆದು ಮಂಡಳಿಯಿಂದ ಮಾಹಿತಿ ಕೋರಿದೆ.

‘ಆಡಿಷನ್‌ ನೆಪದಲ್ಲಿ ನಟಿಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳಿವೆಯೇ? ಇಲ್ಲಿವರೆಗೂ ಎಷ್ಟು ದೂರು ದಾಖಲಾಗಿವೆ? ಇದ್ದರೆ ಅಂತಹವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಚಿತ್ರೀಕರಣದ ಸಂದರ್ಭದಲ್ಲಿ ಕಲಾವಿದೆಯರಿಗೆ ಕಿರುಕುಳ, ಮಾನಸಿಕ ದೌರ್ಜನ್ಯ ನಡೆದರೆ ಮಂಡಳಿಗೆ ದೂರು ನೀಡಬಹುದೇ? ಮಂಡಳಿಯಲ್ಲಿ ಸದಸ್ಯತ್ವ ಪಡೆದಿರುವ ನೋಂದಾಯಿತ ನಿರ್ಮಾಪಕರ ಮಾಹಿತಿಯನ್ನು ಒದಗಿಸಬೇಕು’ ಎಂದು ಆಯೋಗ ಸೂಚಿಸಿದೆ.

‘ಮಂಡಳಿಯ ಅಧೀನದಲ್ಲಿರುವ ಅಂಗ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೆಲಸಗಾರರು ಎಷ್ಟು? ಅವರು ಮಂಡಳಿಯಲ್ಲಿ ನೋಂದಣಿಯಾಗಿದ್ದಾರೆಯೇ? ಅವರಿಗೆ ಇರುವ ಸೌಲಭ್ಯಗಳೇನು? ಸಿನಿಮಾ ರಂಗವನ್ನು ಉದ್ಯಮವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂದಿತ್ತು. ಘೋಷಿಸಿದರೆ ಮಹಿಳಾ ಕಲಾವಿದರು, ತಂತ್ರಜ್ಞರು, ಸದಸ್ಯರು, ಕೆಲಸಗಾರರಿಗೆ ಯಾವ ಸೌಲಭ್ಯ ಸಿಗಲಿವೆ ಎಂಬ ಸಮಗ್ರ ಮಾಹಿತಿ ಕೊಡಬೇಕು. ಮಂಡಳಿಯ ಬೈಲಾ ಪ್ರತಿಯನ್ನು ನೀಡಿ’ ಎಂಬುದು ಸೇರಿದಂತೆ ಹಲವು ಮಾಹಿತಿ ಕೋರಿ ಆಯೋಗವು ಮಂಡಳಿಗೆ ಪತ್ರ ಬರೆದಿದೆ.

ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದ ಬಳಿಕ, ಸ್ಯಾಂಡಲ್‌ವುಡ್‌ನ ಹಲವು ನಟಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇಲ್ಲಿಯ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದರು. ನಂತರ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮಂಡಳಿಯಲ್ಲಿ ಸಭೆ ನಡೆಸಿ ಕಲಾವಿದೆಯರಿಂದ ಅಹವಾಲು ಆಲಿಸಿದ್ದರು. ಸಮಿತಿ ರಚಿಸಲು ಆಯೋಗ ಒಲವು ಹೊಂದಿತ್ತಾದರೂ ಇದಕ್ಕೆ ಮಂಡಳಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆಯೋಗವು ಹಲವು ಮಾಹಿತಿ ಕೇಳಿರುವುದು ಕುತೂಹಲ ಕೆರಳಿಸಿದೆ.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ