ಬರೀ ಮಾತುಗಳಿಂದ ಮಹಿಳಾ ಸಮಾನತೆ ಅಸಾಧ್ಯ: ಎಂ. ಪ್ರಿಯಾಂಗಾ

KannadaprabhaNewsNetwork | Published : Apr 1, 2025 12:47 AM

ಸಾರಾಂಶ

ಕೇವಲ ಮಾತುಗಳಿಂದ ಮಹಿಳಾ ಸಮಾನತೆ ಸಾಧ್ಯವಿಲ್ಲ ಅಥವಾ ಸಮಾನ ಅವಕಾಶಗಳಿಗೆ ನಡೆಯುವ ಹೋರಾಟವಲ್ಲ. ಬದಲಾಗಿ ಆಕೆಯ ಹಕ್ಕುಗಳ ರಕ್ಷಣೆಯೊಂದಿಗೆ ಪುರುಷ ಪ್ರಧಾನ ಸಮಾಜದಲ್ಲಿ ಗೌರವದಿಂದ ಕಾಣಬೇಕಾಗಿದೆ.

ಬ್ಯಾಡಗಿ: ಕೇವಲ ಯೋಜನೆ ರೂಪಿಸುವುದರಿಂದ ಮಹಿಳಾ ಸುರಕ್ಷಿತಳಾಗಲು ಸಾಧ್ಯವಿಲ್ಲ. ಬದಲಾಗಿ ಪುರುಷರ ಮನಸ್ಥಿತಿ ಬದಲಾವಣೆಯಾದಲ್ಲಿ ಮಾತ್ರ ಅದು ಸಾಕಾರಗೊಳ್ಳಲಿದೆ ಎಂದು ಹುಬ್ಬಳ್ಳಿ ವಲಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗಾ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬ್ಯಾಡಗಿ ಸಾರಿಗೆ ಘಟಕ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ ಮಾತುಗಳಿಂದ ಮಹಿಳಾ ಸಮಾನತೆ ಸಾಧ್ಯವಿಲ್ಲ ಅಥವಾ ಸಮಾನ ಅವಕಾಶಗಳಿಗೆ ನಡೆಯುವ ಹೋರಾಟವಲ್ಲ. ಬದಲಾಗಿ ಆಕೆಯ ಹಕ್ಕುಗಳ ರಕ್ಷಣೆಯೊಂದಿಗೆ ಪುರುಷ ಪ್ರಧಾನ ಸಮಾಜದಲ್ಲಿ ಗೌರವದಿಂದ ಕಾಣಬೇಕಾಗಿದೆ ಎಂದರು.

ಆಧುನಿಕ ಯುಗದಲ್ಲಿಯೂ ಕುಟುಂಬದ ಒಳಗೂ ಹೊರಗೂ ಮಹಿಳೆ ವಿರುದ್ಧ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯಲ್ಲಿರುವ ಪುನಶ್ಚೇತನ ಶಕ್ತಿ ಸಮಾಜದಲ್ಲಿ ಸದ್ಬಳಕೆಯಾಗುತ್ತಿಲ್ಲ. ಎಷ್ಟೇ ಕಠಿಣ ನೀತಿ, ನಿಯಮ ತೆಗೆದುಕೊಂಡರೂ ಪ್ರಯೋಜನವಾಗುತ್ತಿಲ್ಲ. ತನ್ನ ಅಂತ್ಯ ಕಾಲದವರೆಗೂ ಪುರುಷನ ಜತೆಗಿದ್ದು, ತಾಯಿಯಾಗಿ, ಮಡದಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಸಹಾಯಹಸ್ತ ಚಾಚುತ್ತಿರುವ ಅವರ ಮನೋಭಾವಕ್ಕೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ. ವಿಜಯಕುಮಾರ ಮಾತನಾಡಿ, ಸತಿಸಹಗಮನ ಪದ್ಧತಿಯಿಂದ ಹಿಡಿದು ಇಂದಿನ ಡಿಜಿಟಲ್ ವಂಚನೆಯಲ್ಲಿಯೂ ಮಹಿಳೆ ಟಾರ್ಗೆಟ್ ಆಗುತ್ತಿದ್ದಾಳೆ. ಹೀಗಾಗಿ ಯಾವುದೇ ಕಾಲಘಟ್ಟದಲ್ಲಿ ಕೂಡ ಮಹಿಳೆ ಸುರಕ್ಷಿತವಾಗಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಅಶೋಕ ಪಾಟೀಲ, ಕೆ.ಆರ್. ನಾಯ್ಕ, ಶಿಲ್ಪಾ ಸಿದ್ದಮ್ಮನವರ, ಶ್ರುತಿ ವಾಲಿಕಾರ, ಅನ್ನಪೂರ್ಣಾ ಹೂಗಾರ, ಜಿ.ಬಿ. ಅಡರಕಟ್ಟಿ, ಆರ್. ಕೇಶವಮೂರ್ತಿ, ಮಂಜುಳಾ ಮಾಸೂರ, ರತ್ನ ಕಲ್ಕಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಎರಡು ಹಂತದಲ್ಲಿ ಬೇಸಿಗೆ ಶಿಬಿರ

ಹಾವೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಇಲಾಖೆಯ ತರಬೇತುದಾರರಿಂದ ಎರಡು ಹಂತದಲ್ಲಿ ಅಥ್ಲೆಟಿಕ್ಸ್ ಮತ್ತು ಹಾಕಿ ತರಬೇತಿ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಏ. 10ರಿಂದ 26ರ ವರೆಗೆ ಹಾಗೂ ಎರಡನೇ ಹಂತದಲ್ಲಿ ಮೇ 2ರಿಂದ 18ರ ವರೆಗೆ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಅಥ್ಲೆಟಿಕ್ಸ್ ಮತ್ತು ಹಾಕಿ ತರಬೇತಿ ನೀಡಲಾಗುವುದು.ಆಸಕ್ತರು ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತಮ್ಮ ಹೆಸರುಗಳನ್ನು ಏ. 1ರಿಂದ ಏ. 9ರ ವರೆಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅಥ್ಲೆಟಿಕ್ಸ್ ತರಬೇತುದಾರ ಪ್ರದೀಪ್ ಎಂ.ಎನ್. ಮೊ. 7337752731 ಹಾಗೂ ಹಾಕಿ ತರಬೇತುದಾರ ಸುಭಾಷ್ ಎನ್. ಶಂಕ್ರಿಕೊಪ್ಪ ಮೊ. 7406265919 ಅವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article