ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನ ಜನರು ಅರ್ಥಿಕವಾಗಿ ಅಬಲ ವರ್ಗದವರಿದ್ದಾರೆ. ಇವರು ಹಾಗೂ ಮಹಿಳೆಯರನ್ನು ಸಹಕಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೇಶದ ಅರ್ಥಿಕ ಅಭ್ಯುದಯ ದ್ವಿಗುಣಗೊಳಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಅಪ್ಪಚ್ಚೋಳಂಡ ಮನು ಮುತ್ತಪ್ಪ ಹೇಳಿದ್ದಾರೆ.ಐಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 7ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಮಹಿಳೆಯರು ಯುವಜನರು ಮತ್ತು ದುರ್ಬಲ ವರ್ಗಗಳಿಗೆ ಸಹಕಾರಿ ಸಂಸ್ಥೆಗಳು’ ಕುರಿತು ಅವರು ಮಾತನಾಡಿದರು.
ಐಗೂರು ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರಿ ಯೂನಿಯನ್, ರಾಜ್ಯ ಸಹಕಾರ ಮಂಡಳಿ, ಸಹಕಾರ ಇಲಾಖೆ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.ವೇಗವಾದ ಡಿಜಿಟಲೀಕರಣದಿಂದ ಪ್ರಪಂಚ ಬೆಳೆಯುತ್ತಿದ್ದು, ಭಾರತ ದೇಶ ಆಧುನಿಕ ಜಗತ್ತಿನೊಂದಿಗೆ ಸ್ಪರ್ಧೆಯಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರನ್ನು ತೊಡಗಿಸಿಕೊಳ್ಳಲು ಅನುದಾನ ನೀಡುತ್ತಿದೆ ಎಂದರು.
ಸನ್ಮಾನ:ಸಂಘದ ಮಾಜಿ ಅಧ್ಯಕ್ಷ, ಮಾಜಿ ನಿರ್ದೇಶಕ ಎಂ.ಎಸ್.ಮುತ್ತಪ್ಪ, ಕೆ.ಸಿ.ರಾಧ, ಡಿ.ಎಸ್.ಪೊನ್ನಪ್ಪ, ಎಂ.ಬಿ.ಪೂವಯ್ಯ, ಜಿ.ಎಂ.ಮುತ್ತಪ್ಪ, ಎಂ.ಪಿ.ಕುಶಾಲಪ್ಪ, ಎಲ್.ಎಂ.ಮಾದಪ್ಪ ಹಾಗೂ ಬಿ.ಎಸ್.ಪೂವಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿದ ಜಿಲ್ಲಾ ಸಂಘದ ಯೂನಿಯನ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಪಂಡ ಉತ್ತಪ್ಪ ಮಾತನಾಡಿ, ಸಹಕಾರ ಸಂಘವನ್ನು ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿದ್ದಾರೆ. ಅದನ್ನು ಕಿರಿಯರು ಉಳಿಸಿ ಬೆಳೆಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಶಿವಕುಮಾರ್ ಸಹಕಾರಿ ಕ್ಷೇತ್ರದ ದುಡಿದ ಎಲ್ಲಾ ಸಹಕಾರಿಗಳನ್ನು 2026 ರ ಸಂಘದ ಸುವರ್ಣ ಮಹೋತ್ಸವದಲ್ಲಿ ಸನ್ಮಾನಿಸಲಾಗುವುದು. ರಾಜಕೀಯ ರಹಿತವಾಗಿ ಸಂಘ ಕೆಲಸ ನಿರ್ವಹಿಸುತ್ತಿದೆ. ಮುಂದಿನ ದಿನದಲ್ಲಿ ಐಗೂರಿನಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕಿ ಜಲಜಾ ಶೇಖರ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಇನ್ನಷ್ಟು ಅವಕಾಶ ಒದಗಿಸಬೇಕೆಂದು ಕರೆ ನೀಡಿದರು.ಮಡಿಕೇರಿ ಸಹಕಾರಿ ತರಬೇತಿ ಕೇಂದ್ರ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ಮಾತನಾಡಿ, ಸಹಕಾರಿ ಕ್ಷೇತ್ರ ಹಸಿವು ಮುಕ್ತ ಬದುಕಿಗೆ ಒತ್ತು ನೀಡುತ್ತಿದೆ. ಪ್ರತಿಯೊಬ್ಬ ಪ್ರಜೆಯನ್ನೂ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದರು.
ಐಗೂರು ಕೃಷಿ ಪತ್ತಿನ ಉಪಾಧ್ಯಕ್ಷ ಡಿ.ಎಸ್.ಚಂಗಪ್ಪ, ನಿರ್ದೇಶಕರಾದ ಡಿ.ಎಚ್.ವಿಶ್ವನಾಥ್, ಅರಸು, ರೋಷನ್, ಲಕ್ಷ್ಮಣ, ಬಸಪ್ಪ, ಕೀರ್ತಿ ಪ್ರಸಾದ್, ಸಂತೋಷ್, ಎಲ್.ಎಂ.ರಾಜೇಶ, ದ್ರಾಕ್ಷಾಯಿಣಿ, ಸುನು ಕಿಶೋರ್, ಕುಟ್ಟಪ್ಪ, ಕಡ್ಲೇರ ಹೊನ್ನಪ್ಪ, ಸಿಇಒ ಡಿಕೆ ರಾಜು ಮತ್ತಿತರರಿದ್ದರು.ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿದರು. ಯೂನಿಯನ್ ವ್ಯವಸ್ಥಾಪಕಿ ವಂದಿಸಿದರು.