ಸಿ.ಕೆ. ನಾಗರಾಜ ಹೊಸಪೇಟೆ
ವಿಜಯನಗರ ಜಿಲ್ಲೆಯ ಪ್ರಮುಖ ಇಲಾಖೆಗಳ ಆಯಕಟ್ಟಿನ ಹುದ್ದೆ ಅಲ್ಲದೇ ವಿವಿಧ ಇಲಾಖೆ, ಜಿಲ್ಲಾಡಳಿತ ಕಚೇರಿ, ತಾಲೂಕು ಕಚೇರಿಗಳಲ್ಲಿ ವಿವಿಧ ಹಂತದ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಜಾಹ್ನವಿ ಎಸ್. ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಆರ್‌ಡಬ್ಲೂ ಎಸ್ ಇಇ ದೀಪಾ, ಹೊಸಪೇಟೆ ತಹಸೀಲ್ದಾರ್ ಶೃತಿ ಎಂ.ಎಂ., ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಹಾಗೂ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್. ಕವಿತಾ, ಡಿಸಿ ಕಚೇರಿಯ ತಹಸೀಲ್ದಾರ್ ಮೇಘನಾ, ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ, ಹೊಸಪೇಟೆ ಅಬಕಾರಿ ಇಲಾಖೆ ಡಿವೈಎಸ್ಪಿ ಭಾರತಿ, ಅಬಕಾರಿ ಇನ್ಸ್ ಪೆಕ್ಟರ್ ನಾಜಿಯಾಬೇಗಂ, ಶೈನಾಜ್‌ಬೇಗಂ, ಶೈಲಜ, ಎಚ್‌ಬಿ ಹಳ್ಳಿಯಲ್ಲಿ ಅಬಕಾರಿ ಮಮತಾ ರಾಣಿ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎನ್.ಭಾನು, ಹರಪನಹಳ್ಳಿ ನಗರಸಭಾ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ.. ಹೀಗೆ ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದು, ಜಿಲ್ಲೆಯ ಆಡಳಿತವನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದೆ.ಅರಣ್ಯ, ನೀರಿಗೂ ಸೈ: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ (ಆರ್‌ಡಬ್ಲೂಎಸ್), 3 ತಾಲೂಕುಗಳಲ್ಲಿ ಮಹಿಳೆಯರೇ ತಾಲೂಕು ದಂಡಾಧಿಕಾರಿಗಳಾಗಿದ್ದಾರೆ. ಜಿಲ್ಲೆಯ ಆಡಳಿತದಲ್ಲಿ ಈ ಹಿಂದೆ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳು ಇರಲಿಲ್ಲ. ನೂತನ ಜಿಲ್ಲೆಯಾದ ಬಳಿಕ ಮಹಿಳಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿರುವುದು ಗಮನಾರ್ಹ.
ಶಾಸಕಿಯರ ತವರು: ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬ ಶಾಸಕಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲತಾ ಮಲ್ಲಿಕಾರ್ಜುನ ಇದ್ದಾರೆ. ಅವರು ಇದೇ ಜಿಲ್ಲೆಯವರು. ಮತ್ತು ಪಕ್ಕದ ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ತವರು ಮನೆ ಹೊಸಪೇಟೆ ತಾಲೂಕಿನ ಕಮಲಾಪುರ ಎಂಬುದು ವಿಶೇಷ.
ಜಿಲ್ಲೆಯ ಹೆಚ್ಚಿನ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳು ಇರುವುದು ಖುಷಿಯ ವಿಚಾರ. ಇಲಾಖೆಯ ಕೆಲಸಗಳಲ್ಲಿ ಮಹಿಳೆಯರು ಸಹ ಸಮರ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಕಾನೂನುಬದ್ದವಾಗಿ ಕೆಲಸ ಮಾಡುವ ಮೂಲಕ ಜನರಿಗೆ ಸ್ಪಂದಿಸಬೇಕು. ನಮ್ಮ ಜಿಲ್ಲೆಯಲ್ಲಿ ಎಲ್ಲ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.