ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಡಿಸಿ ಜಾನಕಿ

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಹಕಾರಿ ಸಂಘಗಳ ಆರ್ಥಿಕ ಸಮತೋಲನ ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಹಕಾರಿ ಸಂಘಗಳ ಆರ್ಥಿಕ ಸಮತೋಲನ ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ನವನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗದ ಮಹಿಳಾ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡ ರಾಜ್ಯಮಟ್ಟದ ಹೈಟೆಕ್ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಉತ್ತಮ ನಿರ್ವಹಣೆ ಕೌಶಲ್ಯದಿಂದ ಸಂಘಗಳ ಸುಸ್ಥಿರ ಬೆಳವಣಿಗೆ ಸಾಧ್ಯ ಎಂದರು.

ಮಹಿಳೆಯರು ಸಂಘಟಿತವಾಗಿ ಕಾರ್ಯನಿರ್ವಹಿಸಿ, ತಮ್ಮ ನಿರ್ಧಾರ ಶಕ್ತಿಯನ್ನು ಬಳಸಿಕೊಂಡರೆ ಸಹಕಾರಿ ಸಂಘಗಳು ಸಮರ್ಥವಾಗಿ ಬೆಳೆಯಲು ಸಾಧ್ಯ. ಸಂಸ್ಥೆಯ ಲಾಭದಾಯಕ ನಿರ್ವಹಣೆಗೆ ಸಂಚಾಲಕರು ತಮ್ಮ ಜ್ಞಾನ ಮತ್ತು ಅನುಭವವನ್ನು ಬಳಸಿಕೊಳ್ಳಬೇಕು. ಸಹಕಾರಿ ಸಂಘಗಳು ಕೇವಲ ವ್ಯವಹಾರ ನಡೆಸಲು ಮಾತ್ರವಲ್ಲ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ ಮಾತನಾಡಿ, ಸಹಕಾರಿ ಸಂಘಗಳ ಯಶಸ್ಸು ಸರಿಯಾದ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಮಹಿಳೆಯರು ಯಾವುದೇ ತುರ್ತು ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಚಿಂತನೆ ಮಾಡಿ ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಬೇಕು. ಸಹಕಾರ ಸಂಘಗಳನ್ನು ದೇಶದ ಆರ್ಥಿಕತೆಗೆ ಸಹಕಾರಿಯಾಗುವಂತೆ ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಹಕಾರ ಕುರಿ ಮಹಾಮಂಡಳಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕಾಶಿನಾಥ್ ಹುಡೇದ ಸಹಕಾರಿ ಸಂಘಗಳ ಬೆಳವಣಿಗೆ ಇತಿಹಾಸದ ಕುರಿತಾಗಿ ಮಾತನಾಡಿದರು. ಈ ತರಬೇತಿ ಕಾರ್ಯಕ್ರಮ ಮಹಿಳೆಯರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವುದರ ಜೊತೆಗೆ ಅವರ ನಿರ್ವಹಣಾ ಕೌಶಲ್ಯಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಖಿ ಸ್ಟಾಫ್‌ ಒನ್‌ ಸೆಂಟರ್ ಆಡಳಿತಾಧಿಕಾರಿ ಶಂಕರಮ್ಮ ಜಮ್ಮನಕಟ್ಟಿ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ಸಖಿ ಸ್ಟಾಫ್‌ ಒನ್‌ ಕೇಂದ್ರದ ಕಾನೂನು ಸಲಹೆಗಾರ್ತಿ ಸೀಮಾ ಇದ್ದಲಗಿ ಕಾನೂನು ಅರಿವು ಕುರಿತು ಮಾಹಿತಿ ನೀಡಿದರು. ಸ್ವಯಂ ಉದ್ಯೋಗ ತರಬೇತುದಾರೆ ಗೀತಾ ಹಂಪಿಹೊಳಿಮಠ ಸ್ವಯಂ ಉದ್ಯೋಗದ ಕುರಿತು ಮಾಹಿತಿ ಹಂಚಿಕೊಂಡರು.

ಜಿಲ್ಲಾ ಸಹಕಾರಿ ಯೂನಿಯನ್ ಬಾಗಲಕೋಟೆ ನಿರ್ದೇಶಕ ಸಂಗಣ್ಣ ಹಂಡಿ, ಸುರೇಶ ಹಾದಿಮನಿ, ಮುತ್ತಪ್ಪ ಬಿ. ಹುಗ್ಗಿ, ಈರಯ್ಯ ಹಿರೇಮಠ, ರಂಗಪ್ಪ ಮರೆಗುದ್ದಿ, ವಿಜಯಲಕ್ಷ್ಮಿ ಪಾಟೀಲ, ವೀರಯ್ಯ ಭದ್ರಗೌಡ ಮತ್ತು ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಕರು ಉಪಸ್ಥಿತರಿದ್ದರು.

Share this article