ಮೂಡುಬಿದಿರೆ: ಆತ್ಮವಿಶ್ವಾಸವೇ ಮನುಷ್ಯನ ಸಬಲೀಕರಣದ ಮೊದಲ ಪ್ರತೀಕ. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮಧುಮಾಲಾ ಕೆ. ಹೇಳಿದರು. ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಗ್ಯಾರಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ನಡೆದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಹ ಶಕ್ತಿಯನ್ನು ಹೆಣ್ಣು ಹುಟ್ಟಿದಾಗಿನಿಂದ ಪಡೆದುಕೊಂಡು ಬಂದಿದ್ದಾಳೆ. ಇದಕ್ಕೆ ಯಾವುದೇ ಪದವಿಯ ಅಗತ್ಯವಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಪಡೆಯದೆ ಆಕೆ ಸಬಲೀಕರಣಗೊಳ್ಳುವ ದಿನಗಳು ಆದಷ್ಟು ಬೇಗ ಬರುವಂತ್ತಾಗಬೇಕೆಂದು ಆಶಿಸಿದರು. ಮೂಡುಬಿದಿರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ. ಸ್ವಾಗತಿಸಿದರು.
- ಡಾ. ಮಧುಮಾಲಾ ಕೆ. , ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ