ದಾಬಸ್‌ಪೇಟೆ: ಮಹಿಳೆಯರು ಎದೆ ಭಾಗದಲ್ಲಿ ಯಾವುದೇ ರೀತಿ ಗಡ್ಡೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದರಿಂದ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಸ್ತನ ಕ್ಯಾನ್ಸರ್ ತಜ್ಞೆ ಡಾ.ಸಿ.ಯು.ಪೂವಮ್ಮ ತಿಳಿಸಿದರು.
ಬೈರಶೆಟ್ಟಿಹಳ್ಳಿ ಗ್ರಾಮದ ಹಿತಚಿಂತನ ಪಬ್ಲಿಕ್ ಶಾಲೆಯಲ್ಲಿ ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಭಾರತ ಸ್ತನ ಕ್ಯಾನ್ಸರ್‌ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ಮಹಿಳೆಯರ ಆಧುನಿಕ ಜೀವನ ಶೈಲಿಯೇ ಮುಖ್ಯ ಕಾರಣವಾಗಿದೆ. ಕೆಲ ಮಹಿಳೆಯರು ಮುಜುಗರದಿಂದ ಸಮಸ್ಯೆಯನ್ನು ಹೇಳಿಕೊಳ್ಳದೇ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದುಕೊಳ್ಳಬೇಕು, ಮಹಿಳೆಯರು ಅದಷ್ಟು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಹಾಗೂ ಮುಂಜಾಗ್ರತ ಕ್ರಮಗಳ ಅನುಸರಿಸಿ ಸ್ತನ ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು ಎಂದರು.ಬೆಳಕು ಅಕಾಡೆಮಿ ಸಂಸ್ಥಾಪಕಿ ಅಶ್ವಿನಿ ಅಂಗಡಿ ಮಾತನಾಡಿ, ಗ್ರಾಮೀಣ ಭಾಗದ ಜನತೆ ಉಚಿತ ಆರೋಗ್ಯ ಶಿಬಿರಗಳ ಬಗ್ಗೆ ತಾತ್ಸಾರ ಮಾಡದೆ ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಭಾಗದ ಬಡಜನರಿಗೆ ಅನುಕೂಲವಾಗಲು ಆರೋಗ್ಯ ಶಿಬಿರ ಹಮ್ಮಿಕೊಂಡಿರುವ ಹಿತಚಿಂತನ ಚಾರಿಟಬಲ್ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದರು.
ಹಿತಚಿಂತನ ಚಾರಿಟಬಲ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ ಮಾತನಾಡಿ, ಹಿತಚಿಂತನ ಚಾರಿಟಬಲ್ ಟ್ರಸ್ಟ್‌ನಿಂದ ಈ ಬಾರಿ ವಿಶೇಷವಾಗಿ ನುರಿತ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗಿದೆ. 5 ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ ವಿತರಣೆ ಮಾಡಲಾಗುತ್ತಿದೆ. ಜತೆಗೆ ಹಿತಚಿಂತನ ಚಾರಿಟಬಲ್ ಟ್ರಸ್ಟ್‌ನಿಂದ ರಾಜ್ಯಾದ್ಯಂತ ಯಾವುದೇ ರೋಗಿಯಾದರೂ ಕರೆ ಮಾಡಿದಲ್ಲಿ ಉಚಿತವಾಗಿ ಕೋರಿಯರ್ ಮೂಲಕ ಔಷಧಿ ಪೂರೈಕೆ ಮಾಡಲಾಗುವುದು. ಈಗಾಗಲೇ ಬೆಳಗಾವಿ, ಮಂಗಳೂರು, ತುಮಕೂರು, ಬೆಂಗಳೂರು ಸೇರಿದಂತೆ ವಿವಿದೆಡೆ ಔಷಧಿ ವಿತರಣೆ ಮಾಡಲಾಗುತ್ತಿದೆ ಎಂದರು.ಆರೋಗ್ಯ ತಪಾಸಣೆ: ಶಿಬಿರದಲ್ಲಿ ಕ್ಯಾನ್ಸರ್, ಪಾರ್ಶ್ವವಾಯ ಸಮಸ್ಯೆ, ಸ್ತ್ರೀಮತ್ತು ಮಕ್ಕಳ ರೋಗ ತಪಾಸಣೆ, ಶ್ವಾಸಕೋಸ, ಥೈರಾಯ್ಡ್ ಸಮಸ್ಯೆ, ನರರೋಗ ಸಮಸ್ಯೆ, ಅಲರ್ಜಿ, ಉಬ್ಬಸ ಉಸಿರಾಟ ಸಮಸ್ಯೆ, ಜೀರ್ಣಕ್ರೀಯೆ, ಫೈಲ್ಸ್ ಮತ್ತು ಪಿಸ್ತುಲಾ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಣ್ಣು ಸಮಸ್ಯೆ, ಚರ್ಮರೋಗ, ಉಚಿತವಾಗಿ ತಪಾಸಣೆ ಮಾಡಿ ಅಗತ್ಯ ಔಷಧಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿತಚಿಂತನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ, ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ, ಶ್ವಾಸಕೋಸ ತಜ್ಞ ಡಾ.ಗಣೇಶ್‌ಪ್ರತಾಪ್, ಮೂಳೆ ತಜ್ಞ ಡಾ.ಅರುಣ್, ಸ್ತ್ರೀರೋಗ ತಜ್ಞೆ ಡಾ.ನೇಹಾಮಹೇಶ್, ನೇತ್ರ ತಜ್ಞೆ ಡಾ.ಮಾನಸ, ನರರೋಗ ತಜ್ಞ ಡಾ.ವಿನಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಪೋಟೋ 1 :ಬೈರಶೆಟ್ಟಿಹಳ್ಳಿ ಹಿತಚಿಂತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮವನ್ನು ಬೆಳಕು ಅಕಾಡೆಮಿ ಸಂಸ್ಥಾಪಕಿ ಅಶ್ವಿನಿಅಂಗಡಿ ಉದ್ಘಾಟಿಸಿದರು.