ಎಲ್ಲಾ ರಂಗದಲ್ಲೂ ಮಹಿಳೆಯರು ಬೆಳೆಯಬೇಕು

KannadaprabhaNewsNetwork |  
Published : Mar 10, 2024, 01:31 AM IST
ಮಹಿಳಾ ದಿನಾಚರಣೆ | Kannada Prabha

ಸಾರಾಂಶ

ಮಹಿಳೆಯರು ತಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು, ಎಲ್ಲ ರಂಗದಲ್ಲಿಯೂ ಬೆಳೆಯಬೇಕು. ಪ್ರಶಸ್ತಿಗಳಿಗಾಗಿ ಅಲೆಯುವ ಬದಲು, ಪ್ರಶಸ್ತಿಯೇ ನಮ್ಮನ್ನು ಹುಡುಕಿಕೊಂಡು ಬರುವಂತೆ ಸಾಧನೆ ಮಾಡಬೇಕೆಂದು ನಗರಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಮಹಿಳೆಯರು ತಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು, ಎಲ್ಲ ರಂಗದಲ್ಲಿಯೂ ಬೆಳೆಯಬೇಕು. ಪ್ರಶಸ್ತಿಗಳಿಗಾಗಿ ಅಲೆಯುವ ಬದಲು, ಪ್ರಶಸ್ತಿಯೇ ನಮ್ಮನ್ನು ಹುಡುಕಿಕೊಂಡು ಬರುವಂತೆ ಸಾಧನೆ ಮಾಡಬೇಕೆಂದು ನಗರಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಆಲದಮರದ ಪಾರ್ಕಿನಲ್ಲಿ ಕನ್ನಡಸೇನೆ ಕರ್ನಾಟಕದ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಕನ್ನಡ ಸೇನೆಯಿಂದ ನಡೆಯುತ್ತಿರುವ ಮೊದಲ ಮಹಿಳಾ ದಿನಾಚರಣೆ ಕಾರ್ಯಕ್ರಮ ಇದಾಗಿದೆ ಎಂದರು.

ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ಮುಂದಿದ್ದಾರೆ. ಏರ್‌ಫೋರ್ಸ್, ಪರ್ಸ್ರ, ನೇವಿ, ಭೂಸೇನೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು, ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯ ಇಂದಿನ ಬೆಳವಣಿಗೆಗೆ ಅನೇಕರ ಕೊಡುಗೆ ಇದೆ. ಹಾಗಾಗಿ ಪ್ರತಿಯೊಬ್ಬರು ಒಂದು ಸಣ್ಣ ಅವಕಾಶವನ್ನು ಕೈಚಲ್ಲದೆ, ಎಲ್ಲಾ ರಂಗದಲ್ಲಿಯೂ ತಮ್ಮ ಚಾಪು ಮೂಡಿಸಬೇಕೆಂದು ಗಿರಿಜಾ ಧನಿಯಕುಮಾರ್ ಕರೆ ನೀಡಿದರು.

ಸಾಹಿತಿ ಪರಿಮಳ ಸತೀಶ್ ಮಾತನಾಡಿ, ಮಹಿಳೆಯರು ಇಂದು ಏನೆಲ್ಲಾ ಸಾಧನೆ ಮಾಡಿದ್ದಾರೆ, ಅದರ ಹಿಂದೆ ಅವರ ಪತಿ, ಅಣ್ಣ, ತಮ್ಮ,ತಂದೆ ಹೀಗೆ ಒಂದು ಗಂಡಸಿನ ಸಹಕಾರವಿದೆ. ಕನ್ನಡಸೇನೆಯ ಮಹಿಳಾ ರಚಿಸುವ ಸಂದರ್ಭದಲ್ಲಿ ಧನಿಯಕುಮಾರ್ ಈ ಅವಕಾಶ ಬಳಸಿಕೊಳ್ಳುವಂತೆ ಸಲಹೆ ನೀಡಿ, ಪದಾಧಿಕಾರಿಗಳಾಗಿ ನೇಮಿಸಿದ್ದರು. ಇಂತಹವರ ಸಹಕಾರ ಮತ್ತಷ್ಟು ಮಹಿಳೆಯರಿಗೆ ದೊರೆಯಲಿ ಎಂದರು.

ಸಂಯುಕ್ತ ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಮಾತನಾಡಿ, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಅನೇಕ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ವಿಶ್ವ ಮಹಿಳಾ ದಿನದ ಅಂಗವಾಗಿ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯೆಯಾಗಿ ನೇಮಕ ಮಾಡಿರುವುದು ಸಂತೋಷದ ವಿಚಾರ ಎಂದರು.

ಸನ್ಮಾನಿತರಾದ ಅಂಗವಿಕಲ ಕ್ರೀಡಾಪಟು ನಿವೇದಿತ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಅದನ್ನು ಮೆಟ್ಟಿನಿಂತೂ ಏನ್ನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಮುನ್ನೆಡೆ ಪ್ರಯತ್ನ, ಗೋವಾದಲ್ಲಿ ನಡೆದ ೨೨ನೇ ರಾಷ್ಟ್ರೀಯ ಪ್ಯಾರಾ ಒಲಂಪಿಕ್‌ನ ಶಾಟ್‌ಪೂಟ್‌ನಲ್ಲಿ ತೃತೀಯ ಸ್ಥಾನ ಪಡೆದು, ಕಂಚಿನ ಪದಕ ಪಡೆದೆ. ನಮ್ಮಂತವರಿಗೆ ಪ್ರೋತ್ಸಾಹ ಮುಖ್ಯ ಎಂದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ ಎಂಬ ಮಾತನ್ನು ಇಂದಿರಾಗಾಂಧಿ 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಉಕ್ಕಿನ ಮಹಿಳೆ ಎಂಬ ಹೆಸರು ಪಡೆಯುವ ಮೂಲಕ ತೋರಿಸಿದ್ದಾರೆ. ಅದರ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಹ ಹಿಂದೂ ಕೋಡ್‌ಬಿಲ್ ಮೂಲಕ ಅವರು ಪುರುಷರಿಗೆ ಸಮಾನವಾಗಿ ಹಕ್ಕುಗಳನ್ನು ಪಡೆಯಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ರಾಜಕಾರಣದ ಉನ್ನತ ಹುದ್ದೆಗಳಲ್ಲಿಯೂ ಮಹಿಳೆಯರು ಸಮಾನ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದರು.

ಅಧ್ಯಕ್ಷತೆಯನ್ನು ಕನ್ನಡ ಸೇನೆ ಮಹಿಳಾ ಘಟಕದ ಅಧ್ಯಕ್ಷ ಸುಕನ್ಯ ವಹಿಸಿದ್ದರು. ಉಪಾಧ್ಯಕ್ಷೆ ಚೇತನ, ಬೆಸ್ಟೇಕ್ ರಾಮರಾಜು,ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಮಹಿಳೆಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ