ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ಎಸ್.ಆರ್. ಕಂಠಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ಜೀವನದಲ್ಲಿ ಸಾಧನೆಯ ಶಿಖರ ತಲುಪಬೇಕಾದರೆ ಶಿಕ್ಷಣ ಅವಶ್ಯವಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಶಿಕ್ಷಣ ಮರೀಚಿಕೆಯಾಗಿತ್ತು. ಆದರೆ, ಇಂದು ಜಗತ್ತಿನ ಎಲ್ಲ ರಂಗದಲ್ಲಿ ಪುರುಷರಿಗಿಂತ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಶಿಕ್ಷಣವೇ ಕಾರಣ ಎಂದು ಹೇಳಿದರು.
ಇಂದು ಕಾಲ ಬಹಳ ಬದಲಾಗಿದೆ. ವಿಜ್ಞಾನ ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದ ಶಿಕ್ಷಣ ಕಲಿಕೆಯಲ್ಲಿ ಒಂದು ಕಡೆ ಮಹಿಳೆ ಮೇಲುಗೈ ಸಾಧಿಸಿದ್ದಾಳೆ. ಆದರೆ ಇನ್ನೊಂದಡೆ ಅದೇ ಮಹಿಳೆ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಬದುಕನ್ನು ಅಸ್ಥಿರಗೊಳಿಸಿಕೊಳ್ಳುತ್ತಿದ್ದಾಳೆ. ಯುವತಿಯರು ಜಾಲತಾಣಗಳ ಮೂಲಕ ಅನಾಮಿಕ ಯುವಕರ ಪ್ರೀತಿಯ ಮೋಹದ ಪಾಶಕ್ಕೆ ಸಿಲುಕಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇದರಿಂದ ಕುಟುಂಬ, ತಂದೆ-ತಾಯಿಗಳ ನೆಮ್ಮದಿ ಹಾಳು ಮಾಡಿ, ತಾವೂ ಹಾಳಾಗುತ್ತಿದ್ದಾರೆ. ಯುವತಿಯರು ಇದರ ಬಗ್ಗೆ ಜಾಗೃತರಾಗಿ ಸೂಕ್ತ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಮಾತನಾಡಿ, ಇಂದು ಶಿಕ್ಷಣ ಇಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗಲಾರದು. ಪ್ರಸ್ತುತ ಜಗತ್ತಿನಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಶಿಕ್ಷಣವೇ ಒಂದು ಶಕ್ತಿಯಾಗಿದೆ ಎಂದರು.
ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶೈಲಾ ಪಟ್ಟಣಶಟ್ಟಿ ಇದ್ದರು.
ನೇತ್ರಾವತಿ ಅಂಗಡಿ ಪ್ರಾರ್ಥಿಸಿದರು. ನೀಲಾಂಬಿಕಾ ಬಾದಿಮನಾಳ ಸ್ವಾಗತಿಸಿದರು. ಸಾವಿತ್ರಿ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾ ರಾಕಿ ಪರಿಚಯಿಸಿದರು. ವಿಜಯಲಕ್ಷೀ ಕಂಠಿ ನಿರೂಪಿಸಿದರು. ವಿಜಯಲಕ್ಷೀ ಲೆಕ್ಕಿಹಾಳ ವಂದಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಸಾರ್ವಜನಿಕ ಕ್ಷೇತ್ರದ ಸೇವೆಯಲ್ಲಿರುವ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಇಳಕಲ್ಲ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕಿ ಲತಾ ಹೇರೂರ, ನಗರ ಪೊಲೀಸ್ ಠಾಣೆಯ ಮಹಿಳಾ ಸಬ್ಇನಸ್ಪೆಕ್ಟರ್ ಎಸ್.ಆರ್. ನಾಯಕ, ಸಮಾಜ ಸೇವಕಿಯರಾದ ಬಸವರಾಜೇಶ್ವರಿ ಮೇರನಾಳ, ಕವಿತಾ ಚಟ್ಟೇರ ಮತ್ತು ಸ್ವಯಂ ಉದ್ಯೋಗಿಗಳಾದ ತುಳಸಾಬಾಯಿ ಹುಬ್ಬಳ್ಳಿ, ದೀಪಾ ಕರವೀರಮಠ, ಪ್ರಗತಿಪರ ರೈತ ಮಹಿಳೆ ಮಮತಾ ಮರೋಳ ಅವರನ್ನು ಸತ್ಕರಿಸಿ ಗೌರವಿಸಲಾಯಿತು.