ಮಹಿಳೆಯರು ಇಂದಿಗೆ ಅಬಲೆಯರಲ್ಲ, ಸಬಲೆಯರು: ಸುನೀತಾ ಶ್ರೀಧರ್

KannadaprabhaNewsNetwork |  
Published : Apr 13, 2024, 01:10 AM IST
ಮಹಿಳಾ ದಿನಾಚರಣೆಯನ್ನು ಸುನೀತಾ ಶ್ರೀಧರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿಕಾರಿಪುರದ ಶ್ರೀ ದತ್ತ ಕೇವಲಾನಂದಾಶ್ರಮದಲ್ಲಿ ತಾಲೂಕು ಬ್ರಾಹ್ಮಣ ಮಹಿಳಾ ಘಟಕದಿಂದ ನಡೆದ ಮಹಿಳಾ ದಿನಾಚರಣೆಯನ್ನು ಸುನೀತಾ ಶ್ರೀಧರ್ ಉದ್ಘಾಟಿಸಿ, ಮಹಿಳೆಯ ಸಂಸ್ಕಾರ, ಸಂಸ್ಕೃತಿ, ಪರಂಪರೆಯ ಕುರಿತು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಇಂದಿಗೆ ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಸಾಧನೆಯ ಮೂಲಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಹಾಗಾಗಿ ಮಹಿಳೆಯರು ಇಂದು ಅಬಲೆ ಯರಲ್ಲ ಸಬಲೆಯರು. ಹೀಗೆ ಹಿಂಜರಿಕೆ ಬಿಟ್ಟು ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಬಳಸಿಕೊಳ್ಳಬೇಕು ಈ ದಿಸೆಯಲ್ಲಿ ಸಂಘ ಎಲ್ಲ ರೀತಿ ಪ್ರೋತ್ಸಾಹ ನೀಡಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಸುನೀತಾ ಶ್ರೀಧರ್ ತಿಳಿಸಿದರು.

ಪಟ್ಟಣದ ಶ್ರೀ ದತ್ತ ಕೇವಲಾನಂದಾಶ್ರಮದ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗ ತಾಲೂಕು ಘಟಕದ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಾದಿ ಕಾಲದಿಂದ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದು, ಕಾಲಕಾಲಕ್ಕೆ ತನ್ನ ಜವಾಬ್ದಾರಿ ಕರ್ತವ್ಯವನ್ನು ಸಮರ್ಥವಾಗಿ ನಿಭಾ ಯಿಸುವ ಮೂಲಕ ಕುಟುಂಬದ ಸದಸ್ಯರಲ್ಲಿ ಸಂಸ್ಕಾರ, ಸಂಸ್ಕೃತಿ, ಪರಂಪರೆಯನ್ನು ಜಾಗೃತಿಗೊಳಿಸಿದ್ದಾಳೆ ಎಂದು ಹೇಳಿದರು.

ತಾಲೂಕು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಹಲವು ಮಹಿಳಾ ಪ್ರತಿಭೆಯರಿದ್ದು ಸೂಕ್ತ ವೇದಿಕೆ ಕೊರತೆಯನ್ನು ಅನುಭವಿಸುತ್ತಿದ್ದರು. ಇದೀಗ ಮಹಿಳಾ ಘಟಕ ಎಲ್ಲರನ್ನು ಒಗ್ಗೂಡಿಸಿ ಸಂಘಟನೆ ಸದೃಢಗೊಳಿಸುವ ಜತೆಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಹೆಮ್ಮೆ ಸಂಗತಿ ಎಂದರು.

ಸಂಘದ ಗೌರವಾಧ್ಯಕ್ಷೆ ಅಪರ್ಣಾ ಗುರುಮೂರ್ತಿ ಮಾತನಾಡಿ, ಮಹಿಳೆಯರ ಸಂಘಟನೆ ಮೂಲಕ ಸುಪ್ತ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶ ಸಂಘ ಹೊಂದಿದ್ದು, ಮಹಿಳೆಯರು ಹಿಂಜರಿಕೆ ತೊರೆದು ಸಂಘದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವೈಯುಕ್ತಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿ ಕುಟುಂಬಸ್ಥರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತಿತರ ವಿಶೇಷ ಸಂದರ್ಬದಲ್ಲಿ ಸಂಘದ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶುಭ ರಘು ಮಾತನಾಡಿ, ಸಂಘದ ಆರಂಭಕ್ಕೆ ಎಲ್ಲರ ಪ್ರೋತ್ಸಾಹ ಕಾರಣವಾಗಿದ್ದು, ಇದೀಗ ಸದಸ್ಯರ ಕ್ರಿಯಾಶೀಲತೆ ಉತ್ತಮ ಕಾರ್ಯಕ್ಕೆ ಪ್ರೇರಣೆ ನೀಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್ಸಿ ಹಾಗೂ ಎಂಎಸ್ಸಿಯಲ್ಲಿ ಕ್ರಮವಾಗಿ 6 ಮತ್ತು 5 ಚಿನ್ನದ ಪದಕಗಳಿಸಿದ ಕು.ಅನ್ವಿತಾ ಜೋಷಿ ರನ್ನು ಸನ್ಮಾನಿಸಲಾಯಿತು.ಎಲ್ಲ ವಯೋಮಾನದ ಮಹಿಳೆಯರಿಗೆ ಆಟೋಟ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ತೇಜಸ್ವಿನಿ ರಾಘವೇಂದ್ರ ಬಹುಮಾನ ವಿತರಿಸಿದರು. ಫ್ಯಾಷನ್ ಷೋ, ಸಾಂಸ್ಕೃತಿಕ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಮೆರಗು ಹೆಚ್ಚಿಸಿತು.

ವೇದಿಕೆಯಲ್ಲಿ ಉಮಾ,ಸುಮ ಜೋಯ್ಸ್, ಸುಷ್ಮಾ ದೀಕ್ಷಿತ್, ಜಯಲಕ್ಷ್ಮಿ, ಪಲ್ಲವಿ, ಶ್ರೀದೇವಿ, ದಿವ್ಯ, ವರ್ಷಾ, ಬಿಂದು, ಲಲಿತ, ವಿಜಯಲಕ್ಷ್ಮಿ ನಾಡಿಗ್ ಮತ್ತಿತರರು ಉಪಸ್ಥಿತರಿದ್ದರು. ಸುನಿತಾ ಜೋಯ್ಸ್ ಸ್ವಾಗತಿಸಿ,ಗೌರಿಭಟ್ ನಿರೂಪಿಸಿ ಸುಕನ್ಯಾ ವಂದಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''