ಅಭ್ಯರ್ಥಿಗಳ ನಿದ್ದೆಗೆಡಿಸಿದ ಮಹಿಳಾ ಮತದಾರರು!

KannadaprabhaNewsNetwork |  
Published : May 09, 2024, 01:08 AM IST
1 | Kannada Prabha

ಸಾರಾಂಶ

ಸ್ತ್ರೀಶಕ್ತಿ ಯಾರಿಗೆ ಶಕ್ತಿ ನೀಡುತ್ತದೆ ಎಂಬುದೀಗ ಚರ್ಚೆಯ ವಿಷಯವಾಗಿದೆ. ಅದರಲ್ಲೂ ಹೀಗೆ ಸ್ತ್ರೀಶಕ್ತಿ ಪ್ರದರ್ಶಿಸಿದ್ದು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು. ಇದು ಯಾರಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಲೋಕಸಭೆ ಚುನಾವಣೆ ಯಾವುದೇ ಗೊಂದಲ, ತಾಂತ್ರಿಕ ಸಮಸ್ಯೆ ಇಲ್ಲದೇ ಧಾರವಾಡ ಕ್ಷೇತ್ರಾದ್ಯಂತ ಶಾಂತಿಯುತವಾಗಿ ನಡೆದು ಇವಿಎಂ ಮಷಿನ್‌ಗಳೆಲ್ಲ ಸ್ಟ್ರಾಂಗ್‌ ರೂಮಿನಲ್ಲಿ ಭದ್ರವಾಗಿವೆ. ಕಳೆದ ಬಾರಿಗಿಂತ ಶೇ. 4ರಷ್ಟು ಮತದಾನದ ಪ್ರಮಾಣವೂ ಹೆಚ್ಚಳವಾಗಿದೆ. ಆದರೆ ಈ ಹೆಚ್ಚುವರಿ ಮತದಾನದಿಂದ ಯಾರಿಗೆ ಲಾಭ? ಅದರಲ್ಲೂ ಮಹಿಳಾ ಮಣಿಗಳು ಹೆಚ್ಚು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದು ಅಕ್ಷರಶಃ ಎರಡೂ ಪಕ್ಷಗಳನ್ನು ನಿದ್ದೆಗೆಡಿಸಿದೆ. ಈ ಬಗ್ಗೆಯೇ ಚರ್ಚೆ ಬಲು ಜೋರಾಗಿದೆ.

2019 ಹಾಗೂ 2024ರ ಮತದಾನ ಪ್ರಮಾಣ ಅವಲೋಕಿಸಿದಾಗ ಮಹಿಳಾ ಮಣಿಗಳು ಮತದಾನ ಪ್ರಕ್ರಿಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವುದು ಗೊತ್ತಾಗುತ್ತದೆ. 2019ರಲ್ಲಿ 5,69,265 (ಶೇ.68.71) ಮತದಾನ ಮಾಡಿದ್ದರು. ಪುರುಷರ ಮತದಾನ ಪ್ರಮಾಣ ಆಗ 638848 (ಶೇ.72.38) ಆಗಿತ್ತು. ಆಗ ಒಟ್ಟಾರೆ ಮತದಾನ ಶೇ.70ರಷ್ಟಾಗಿತ್ತು.

ಆದರೆ, 2024ರಲ್ಲಿ 18,31,975 ಜನ ಮತದಾರರ ಪೈಕಿ 13,62,421 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. 6,99,244 (ಶೇ.76) ಪುರುಷ ಮತದಾರರು ಮತದಾನ ದಾಖಲಿಸಿದ್ದಾರೆ. ಕಳೆದ ಸಲಕ್ಕಿಂತ ಬರೀ ಶೇ.2ರಷ್ಟು ಹೆಚ್ಚು ಪುರುಷರು ಮತಚಲಾಯಿಸಿದಂತಾಗಿದೆ. ಆದರೆ 6,63,151 (ಶೇ.72) ಮಹಿಳಾ ಮಣಿಗಳು ಮತ ಚಲಾಯಿಸಿದ್ದಾರೆ. ಅಂದರೆ ಕಳೆದ ಸಲಕ್ಕಿಂತ ಶೇ.4ರಷ್ಟು ಹೆಚ್ಚು ಮಹಿಳೆಯರು ಮತಗಟ್ಟೆಯತ್ತ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಸ್ತ್ರೀ ಶಕ್ತಿಯನ್ನು ತೋರಿದ್ದಾರೆ.

ಚರ್ಚೆ ಬಲುಜೋರು:

ಹಾಗಾದರೆ ಸ್ತ್ರೀಶಕ್ತಿ ಯಾರಿಗೆ ಶಕ್ತಿ ನೀಡುತ್ತದೆ ಎಂಬುದೀಗ ಚರ್ಚೆಯ ವಿಷಯವಾಗಿದೆ. ಅದರಲ್ಲೂ ಹೀಗೆ ಸ್ತ್ರೀಶಕ್ತಿ ಪ್ರದರ್ಶಿಸಿದ್ದು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು. ಇದು ಯಾರಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್‌ ಘೋಷಿಸಿ ಜಾರಿಗೊಳಿಸಿದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಂದಾಗಿ ಈ ಸಲ ಮಹಿಳೆಯರ ಮತಗಳೆಲ್ಲ ಕೈ ವಶವಾಗುವುದು ಗ್ಯಾರಂಟಿ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದ್ದು. ಇದೇ ವೇಳೆ ಮಹಿಳೆಯರನ್ನು ಸೆಳೆಯಲು ಬಿಜೆಪಿ ಕೂಡ ಲಕ್‌ ಪತಿ ದೀದಿ, ಉಜ್ವಲ್‌ ಯೋಜನೆಯನ್ನು ಘೋಷಿಸಿತ್ತು. ಜತೆಗೆ ಶ್ರೀರಾಮನ ಭಕ್ತಿ, ಕಾಲೇಜು ವಿದ್ಯಾರ್ನಿನಿ, ನೇಹಾ ಹಿರೇಮಠ ಹತ್ಯೆಯ ಆಕ್ರೋಶದಿಂದ ಮಹಿಳೆಯರೆಲ್ಲ ಬಿಜೆಪಿಗೆ ಬೆಂಬಲಿಸಿದ್ದಾರೆ ಎನ್ನುವ ಲೆಕ್ಕಾಚಾರ ಬಿಜೆಪಿಯದು.

ನಿಖರ ಮಾಹಿತಿಗೆ ಹೆಣಗಾಟ:

ಪ್ರತಿಸಲ ಚುನಾವಣೆಯಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ. ಯಾವ್ಯಾವ ಕ್ಷೇತ್ರದಲ್ಲಿ ತಮಗೆ ಹೆಚ್ಚೆಚ್ಚು ಅನುಕೂಲವಾಗಲಿದೆ ಎಂಬುದನ್ನು ಎರಡೂ ಪಕ್ಷಗಳು ಆಂತರಿಕ ಸಮೀಕ್ಷೆ ಮೂಲಕ ಪಕ್ಕಾ ಮಾಡಿಕೊಳ್ಳುತ್ತಿದ್ದರು. ಆದರೆ ಈ ಸಲ ಗ್ಯಾರಂಟಿ, ಲಕ್‌ಪತಿ ದೀದಿ, ಚುನಾವಣೆ ಸಂದರ್ಭದಲ್ಲಿ ಆಗಿರುವ ವಿವಿಧ ಘಟನೆಗಳಿಂದ ಮತದಾರ ಯಾರತ್ತ ವಾಲಿದ್ದಾನೆ ಎಂಬುದು ಪಕ್ಷಗಳಿಗೂ ನಿಖರ ಲೆಕ್ಕ ಪಕ್ಕಾ ಆಗುತ್ತಿಲ್ಲ. ನಿಖರ ಲೆಕ್ಕಕ್ಕಾಗಿ ಹೆಣಗಾಡುತ್ತಿವೆ ಎಂಬುದು ಎರಡೂ ಪಕ್ಷಗಳ ಮುಖಂಡರ ಅಂಬೋಣ.

ಒಟ್ಟಿನಲ್ಲಿ ಮತದಾನ ಹೆಚ್ಚಾದರೂ ತಮ್ಮದೇ ಗೆಲುವು ಎಂದು ನಿಕ್ಕಿಯಾಗಿ ಹೇಳುವ ಪರಿಸ್ಥಿತಿ ಎರಡು ಪಕ್ಷಗಳಲ್ಲೂ ಇಲ್ಲ. ಫಲಿತಾಂಶ ಕುರಿತಂತೆ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ಪಕ್ಷಗಳ ಎದೆ ಡವಡವ ಆಗುತ್ತಿರುವುದಂತೂ ಸತ್ಯ. ಪಕ್ಷಗಳ ಲೆಕ್ಕಾಚಾರ ಏನೇ ಇದ್ದರೂ ಮತದಾರ ಲೆಕ್ಕಾಚಾರ ತಿಳಿಯಲು ಜೂ.4ರ ವರೆಗೆ ಎಲ್ಲರೂ ಕಾಯುವುದು ಅನಿವಾರ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ದಾಟುತ್ತಿದ್ದಾಗ ಟೆಂಪೋ ಡಿಕ್ಕಿಹೊಡೆದು ಮಹಿ‍ಳೆ ದಾರುಣ ಸಾವು
ಸರ್ಕಾರಿ ಶಾಲೆ ಮುಚ್ಚಿದರೆ ರಾಜ್ಯವ್ಯಾಪಿ ಹೋರಾಟ