ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಮಹಿಳೆಯರು: ಶಾಸಕಿ ಎಂ.ಪಿ. ಲತಾ

KannadaprabhaNewsNetwork | Published : Mar 9, 2024 1:35 AM

ಸಾರಾಂಶ

ಹೆಣ್ಣು ಇಲ್ಲ ಎಂದರೆ ಯಾವ ಕ್ಷೇತ್ರ ಪರಿಪೂರ್ಣವಲ್ಲ. ಮಾ. 8ಕ್ಕೆ ಮಾತ್ರ ಮಹಿಳಾ ದಿನಾಚರಣೆಯನ್ನು ಸೀಮಿತ ಮಾಡಬೇಡಿ.

ಹರಪನಹಳ್ಳಿ: ಎಂ.ಪಿ. ರವೀಂದ್ರ ಪ್ರತಿಷ್ಠಾನ ವತಿಯಿಂದ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರು ಹಬ್ಬದ ಸಂಭ್ರಮ ಅನುಭವಿಸಿದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಶಾಸಕಿ ಎಂ.ಪಿ. ಲತಾ ಅವರ ಜತೆ ವೇದಿಕೆ ಹಂಚಿಕೊಂಡರು. ವೇದಿಕೆಯ ಕೆಳಗಡೆ ಸಹ ಬಹುತೇಕ ಜಾಗವನ್ನು ಮಹಿಳೆಯರೇ ಆಕ್ರಮಿಸಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಅವರು, 2019ರಿಂದ ಎಂ.ಪಿ. ರವೀಂದ್ರ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆ ತಾಲೂಕಿನ ವಿವಿಧೆಡೆ ಮಾಡಿಕೊಳ್ಳುತ್ತಾ ಬಂದಿದ್ದೇವೆ ಎಂದ ಅವರು, ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾಳೆ. ಮಹಿಳೆಯರಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಹೆಣ್ಣು ಇಲ್ಲ ಎಂದರೆ ಯಾವ ಕ್ಷೇತ್ರ ಪರಿಪೂರ್ಣವಲ್ಲ. ಮಾ. 8ಕ್ಕೆ ಮಾತ್ರ ಮಹಿಳಾ ದಿನಾಚರಣೆಯನ್ನು ಸೀಮಿತ ಮಾಡಬೇಡಿ. ಸಾಮಾಜಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ನಮ್ಮನ್ನು ಜತೆ ಜತೆಯಾಗಿ ಕರೆದುಕೊಂಡು ಹೋಗಿ ಎಂದರು.

ತುಮಕೂರಿನ ರಂಗಮ್ಮ ಹೊದೆಕಲ್‌ ಮಾತನಾಡಿ, ಭಾಷಣ ಮಾಡಿದ ಕೂಡಲೇ ಎಲ್ಲವೂ ಬದಲಾಗಲ್ಲ. ಬದಲಾವಣೆ ಅಷ್ಟು ಸುಲಭವಲ್ಲ. ನಮ್ಮ ಅರಿವಿನಿಂದ ಬದಲಾವಣೆಯಾಗಬೇಕು. ವೈಚಾರಿಕತೆಯಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

50ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ- ಸಂಸ್ಥೆಗಳ ಕಾರ್ಯಕರ್ತರು ಶಾಸಕರನ್ನು ಗೌರವಿಸಿದರು. ದ್ವಾರಕೇಶ ಎಂಬವರು ಮಾತ್ರ ನಿರೂಪಣೆ ಮಾಡಿದ್ದನ್ನು ಬಿಟ್ಟರೆ ಉಳಿದ ವೇದಿಕೆ ತುಂಬಾ ಮಹಿಳಾಮಣಿಗಳೇ ರಾರಾಜಿಸಿ ಸಭ್ರಮಿಸಿದರು.

ತಹಸೀಲ್ದಾರ್‌ ಗಿರೀಶಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಉದ್ದಾರ ಗಣೇಶ, ತಾಪಂ ಇಒ ಚಂದ್ರಶೇಖರ ಸೇರಿದಂತೆ ಇತರ ಪುರುಷ ಗಣ್ಯರು ಸಭಾಂಗಣದ ಎದುರು ಅಲ್ಲಲ್ಲಿ ಕುಳಿತು ಮಹಿಳಾ ಸಂಭ್ರಮವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಚಿಗಟೇರಿ ಬ್ಲಾಕ್‌ ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ವನಜಾಕ್ಷಿ ಶಿವಯೋಗಿ, ಗುಂಡಗತ್ತಿ ನೇತ್ರಾವತಿ, ಉಮಾ, ಕವಿತಾ ಸುರೇಶ, ಬಿಸಿಎಂ ಇಲಾಖೆಯ ವಿಜಯಲಕ್ಷ್ಮಿ ಹತ್ತಿಕಾಳು, ಹಲುವಾಗಲು ಪಿಎಸ್‌ಐ ನಾಗರತ್ನ, ಜಿ. ಪದ್ಮಲತಾ, ಸಿಡಿಪಿಒ ಇಲಾಖೆಯ ರೇಣುಕಾ, ಕಾರ್ಮಿಕ ಇಲಾಖೆಯ ಅಶ್ವಿನಿ, ತೋಟಗಾರಿಕೆಯ ರಂಜಿತ, ಅರಣ್ಯ ಇಲಾಖೆಯ ಪ್ರತಿಭಾ, ಚೆನ್ನಬಸಮ್ಮ, ಆಹಾರ ಇಲಾಖೆಯ ಕೊಟ್ರಮ್ಮ, ಕಣವಿಹಳ್ಳಿಯ ಲಕ್ಷ್ಮಿಚಂದ್ರಶೇಖರ, ಸುಮಾ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.

Share this article