ಮಹಿಳಾ ಸಂವೇದನೆ ಅಭಿವ್ಯಕ್ತಿಸಿದ ಸಾಹಿತಿ ವಿಜಯದಬ್ಬೆ: ವೈ.ಎಸ್.ಸಿದ್ದೇಗೌಡ

KannadaprabhaNewsNetwork | Published : Jun 12, 2024 12:33 AM

ಸಾರಾಂಶ

ವಿಜಯದಬ್ಬೆ ತಮ್ಮ ಬರವಣಿಗೆಯಲ್ಲಿ ಮಹಿಳೆಯ ನೋವನ್ನು ಬಿಂಬಿಸುವ ಮೂಲಕ ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಿಸಿ ಸ್ತ್ರೀ ಪರವಾಗಿ ನಿಂತ ದಿಟ್ಟ ಮಹಿಳಾ ಸಾಹಿತಿ ಎಂದು ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಹೇಳಿದರು. ಬೇಲೂರಿನಲ್ಲಿ ಹಮ್ಮಿಕೊಂಡ ‘ಸಾಹಿತಿ ವಿಜಯದಬ್ಬೆ ಅವರ ಒಂದು ನೆನಪು ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಆಯೋಜನೆ । ವಿಜಯದಬ್ಬೆ ಒಂದು ನೆನಪು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೇಲೂರು

ವಿಜಯದಬ್ಬೆ ತಮ್ಮ ಬರವಣಿಗೆಯಲ್ಲಿ ಮಹಿಳೆಯ ನೋವನ್ನು ಬಿಂಬಿಸುವ ಮೂಲಕ ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಿಸಿ ಸ್ತ್ರೀ ಪರವಾಗಿ ನಿಂತ ದಿಟ್ಟ ಮಹಿಳಾ ಸಾಹಿತಿ ಎಂದು ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಹೇಳಿದರು.

ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ‌ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡ ‘ಸಾಹಿತಿ ವಿಜಯದಬ್ಬೆ ಅವರ ಒಂದು ನೆನಪು ಕಾರ್ಯಕ್ರಮ’ದಲ್ಲಿ ಮಾತನಾಡಿ, ‘ಜಾನಪದ ಪರಿಷತ್ತು ಕಲೆ. ಸಾಹಿತ್ಯ, ನೃತ್ಯ, ಸಂಗೀತ ಹೀಗೆ ವಿವಿಧ ಪ್ರಕಾರದಲ್ಲಿ ಪ್ರೋತ್ಸಾಹ ಜತೆಗೆ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತ ಬಂದಿದೆ. ವಿಶೇಷವಾಗಿ ನಮ್ಮ ಬಹುತೇಕ ಕಾರ್ಯಕ್ರಮ ಶಾಲಾ ಕಾಲೇಜುಗಳಲ್ಲಿ ನಡೆಸುತ್ತ ಜಾನಪದದ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿದೆ. ವಿಜಯದಬ್ಬೆ ನಮ್ಮ ಬೇಲೂರಿನಲ್ಲಿ ಜನ್ಮ ತಾಳಿ ನಾಡಿನ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು‌ ಮೂಡಿಸಿದ್ದಾರೆ’ ಎಂದ ಹೇಳಿದರು.

ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಬೇಲೂರು ಕಲೆಗಳ ತವರು. ಇಂತಹ ಸ್ಥಳದಲ್ಲಿ ಬಹುತೇಕ ಮಾಹನ್ ಪುರುಷರ ಪ್ರತಿಮೆ, ವೃತ್ತ ಮತ್ತು ರಸ್ತೆ ಹೆಸರನ್ನು ‌ನಾಮಕರಣ ಮಾಡಿದ್ದಾರೆ. ಅಂತೆಯೇ ಬೇಲೂರಿನ ಕೀರ್ತಿಯನ್ನು ನಾಡಿನಲ್ಲಿ ಹರಡಿದ ಡಾ.ವಿಜಯ ದಬ್ಬೆ ಮತ್ತು ಬೇಲೂರು ಕೃಷ್ಣಮೂರ್ತಿ ಅವರ ಹೆಸರನ್ನು ಯಾವುದಾದರೂ ರಸ್ತೆ ಅಥವಾ ವೃತ್ತಕ್ಕೆ ನಾಮಕರಣ ಮಾಡಬೇಕಿದೆ. ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನ ಬಗ್ಗೆ ಗಮನ ನೀಡಬೇಕು’ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಹಾಗೂ ವಿಜಯದಬ್ಬೆರವರ ಸಹೋದರ ಸೋಮಶೇಖರ ಮಾತನಾಡಿ, ಡಾ.ವಿಜಯದಬ್ಬೆ ನಾಡಿನ ಸಾಹಿತ್ಯದಲ್ಲಿ‌ ಮೇರು ಸ್ಥಾನ ಪಡೆದಿದ್ದಾರೆ. ಇಂತಹವರು ತಮ್ಮ ಕುಟುಂಬದಲ್ಲಿ ತಮ್ಮ ಅಕ್ಕನಾಗಿದ್ದು ತಮ್ಮ‌ ಪುಣ್ಯ. ಚಿಕ್ಕ ವಯಸ್ಸಿನಲ್ಲೇ ಸಮಾನತೆ ಹೋರಾಟ ಮನೋಭಾವವಿತ್ತು, ಕುಟುಂಬದ ಒಪ್ಪಿಗೆ ಪಡೆದು ಅಂದಿನ ಕಾಲಘಟ್ಟದಲ್ಲಿ ಸ್ನಾತಕೋತ್ತರ ‌ಪದವಿ ಪಡೆದು ಸಾಹಿತ್ಯದಲ್ಲಿ ಹೆಚ್ಚಿನ ಕೃಷಿ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ.ವಿಜಯದಬ್ಬೆ ಬಗ್ಗೆ ಚಿಕ್ಕಮಗಳೂರು ಕವಯತ್ರಿ ವೇದ ಉಪನ್ಯಾಸ ನೀಡಿದರು. ಉಳಿದಂತೆ ಕಾಲೇಜು ‌ಪ್ರಾಂಶುಪಾಲ ಶಿವಕುಮಾರ್, ಸಾಹಿತಿ ಇಂದಿರಮ್ಮ, ಸಾಹಿತಿ ಸೋಂಪುರ ಪ್ರಕಾಶ್, ಉಪನ್ಯಾಸಕ ಧನಂಜಯ, ಮುಖ್ಯ ಶಿಕ್ಷಕ ಗಂಗೇಗೌಡ, ಮೋಹನ್, ಶೇಷಪ್ಪ ಹಾಗೂ ವಿದ್ಯಾರ್ಥಿಗಳು ಡಾ. ವಿಜಯದಬ್ಬೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಫೋಟೋ: ಜಾನಪದ ಸಾಹಿತ್ಯ ಪರಿಷತ್ತು ವತಿಯಿಂದ ಬೇಲೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತಿ ವಿಜಯ ದಬ್ಬೆ ಜನ್ಮ ದಿನಾಚಾರಣೆ ಹಮ್ಮಿಕೊಳ್ಳಲಾಗಿತ್ತು.

Share this article