ನುಡಿದಂತೆ ನಡೆದಾಗ ಮಾತಿಗೆ ಅರ್ಥ ಬರುತ್ತದೆ: ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ

ಅಕ್ಕಮಹಾದೇವಿ ಎಂದೆಂದಿಗೂ ಆದರ್ಶವಾಗಿದ್ದಾರೆ. ಅವರು ಸ್ವಾತಂತ್ರ್ಯದ ದ್ಯೋತಕ. ಅಕ್ಕಮಹಾದೇವಿ ಮನುಷ್ಯ ಶ್ರೇಷ್ಠರಾಗಿದ್ದಾರೆ. ಅವರ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು.

KannadaprabhaNewsNetwork | Published : Apr 24, 2024 7:32 PM IST

ಸಂಡೂರು: ಇಂದು ಮಾತು ಅರ್ಥವನ್ನು ಕಳೆದುಕೊಳ್ಳುತ್ತಿದೆ. ನಮ್ಮ ಮಾತು ಇತರರನ್ನು ಮಾತನಾಡಿಸಬೇಕಿತ್ತು. ನುಡಿದಂತೆ ನಡೆದಾಗ ಮಾತಿಗೆ ಅರ್ಥ ಬರುತ್ತದೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಮಂಗಳವಾರ ಸ್ಥಳೀಯ ಅಕ್ಕನ ಬಳಗದಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ೩೫೩ನೇ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾತಿಗೆ ಗೌರವ ಕೊಡಲು ನುಡಿಯತೊಡಗಿದೆ ಹಾಗೂ ಅದನ್ನು ಬರೆಯತೊಡಗಿದೆ. ಮಾತು ಬದುಕುವುದನ್ನು ಕಲಿಸುತ್ತದೆ. ಮಾತು ತ್ರಿಲೋಕ ಸಂಚಾರಿಯಾಗಿದೆ. ಮಾತು ಬೆಳಕನ್ನು ಬೀರಿದರೆ, ಅದು ದಾರಿದೀಪವಾಗಲಿದೆ ಎಂದು ಮಾಹಿತಿ ಮಹತ್ವವನ್ನು ಕುರಿತು ಅವರು ವಿವರಿಸಿದರು.

ಹಿರಿಯ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ಸೃಜನಶೀಲತೆ ಮತ್ತು ಮಹಿಳಾ ಅಸ್ಮಿತೆ ವಿಷಯ ಕುರಿತು ಉಪನ್ಯಾಸ ನೀಡಿ, ಅಕ್ಕಮಹಾದೇವಿ ಎಂದೆಂದಿಗೂ ಆದರ್ಶವಾಗಿದ್ದಾರೆ. ಅವರು ಸ್ವಾತಂತ್ರ್ಯದ ದ್ಯೋತಕ. ಅಕ್ಕಮಹಾದೇವಿ ಮನುಷ್ಯ ಶ್ರೇಷ್ಠರಾಗಿದ್ದಾರೆ. ಅವರ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಐಟಿ, ಬಿಟಿ ಯುಗ ಹಾಗೂ ವೇಗದ ಭರಾಟೆಯಲ್ಲಿ ನಾವು ನಮ್ಮನ್ನು, ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಕೌಟುಂಬಿದ ಸಂಬಂಧ ಹಾಗೂ ಭಾಂದವ್ಯ ಕೆಡುತ್ತಿದೆ. ಬೌದ್ಧಿಕ ದುರಹಂಕಾರ ನಮ್ಮನ್ನು ಆಳುತ್ತಿದೆ. ಸಮಾಜದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಇಂದಿನ ಬಹುತೇಕ ಯುವ ಜನಾಂಗದಲ್ಲಿ ಆದರ್ಶ, ಕಲ್ಪನೆ, ಕನಸಿಲ್ಲ. ಸಾಮಾಜಿಕ ಮಾಧ್ಯಮಗಳು ನಮ್ಮನ್ನು ಚಟುವಟಿಕೆ ಇಲ್ಲದಂತೆ ಮಾಡುತ್ತಿವೆ. ಸೃಜನಶೀಲತೆ ಹಾಳಾಗತೊಡಗಿದೆ ಎಂದು ವಿಷಾದಿಸಿದರು.

ಮಹಿಳೆಯರು ತಮ್ಮಲ್ಲಿನ ಶಕ್ತಿ, ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಗುರುತಿಸಿಕೊಂಡು ಅಭಿವೃದ್ಧಿ ಪಡಿಸಿಕೊಳ್ಳಬೇಕು. ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸೃಜನಶೀಲತೆ ಜೀವನಕ್ಕೆ ಅಗತ್ಯವಾಗಿದೆ. ಸೃಜನಶೀಲತೆ ಹುಟ್ಟುವುದು ಅಂತರಂಗದಲ್ಲಿ. ಸಾಮರಸ್ಯೆದ ಬದುಕೇ ಬದುಕು. ಹೆಣ್ಣಿಗೆ ಸ್ವಾತಂತ್ರ್ಯವನ್ನು ಕೊಟ್ಟವರು ಬಸವಾದಿ ಶರಣರು. ಮನುಷ್ಯತ್ವ, ಪರಿಸರ ಹಾಗೂ ಕನ್ನಡ ಪ್ರಜ್ಞೆಯಿಂದ ಬದುಕು ಹಸನಾಗುತ್ತದೆ. ಇದರ ಮೂಲಕ ಬದುಕುವ ಕಲೆ ಕಲಿಯಬೇಕು ಎಂದು ತಿಳಿಸಿದರು.

ಜಿಂದಾಲ್ ಆದರ್ಶ ವಿದ್ಯಾಲಯದ ಉಪನ್ಯಾಸಕಿ ಅಂಬಿಕಾ ಶರಣಬಸಪ್ಪ ಪಾಟೀಲ್, ನಿವೃತ್ತ ಆರೋಗ್ಯಾಧಿಕಾರಿ ಡಾ. ರಾಮಶೆಟ್ಟಿ, ಅಕ್ಕನಬಳಗದ ಗೌರವ ಅಧ್ಯಕ್ಷರಾದ ಶಾಂತಮ್ಮ ಅಂಕಮನಾಳ್, ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷರಾದ ಜ್ಯೋತಿ ನಾಗರಾಜ ಗುಡೆಕೋಟೆ, ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು, ಪಟ್ಟಣದ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿದರು.

ಸಹನಾ ಗಂಗಾಧರ ಹೆಚ್ ವಚನ ಪಠಣ ಮಾಡಿದರು. ರತ್ನಾ ಪ್ರಕಾಶ್ ಬಿ.ಎಂ. ಅವರು ತಿಂಗಳ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಕ್ಕನಬಳಗದ ಕಾರ್ಯದರ್ಶಿ ವಿಶಾಲಾಕ್ಷಿ ಕುಮಾರಸ್ವಾಮಿ ಉಗ್ರಾಣದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಶಶಿಕಲಾ ಚಂದ್ರಶೇಖರ ಹಾಗೂ ಪಾರ್ವತಿ ಕೊಟ್ರೇಶ್ ಅಂಕಮನಾಳ್ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ವಂದಿಸಿದರು. ವೆಸ್ಕೊ ಕಂಪನಿಯ ಕೆ.ಎಸ್. ರತ್ನಮ್ಮ ವೀರಭದ್ರಪ್ಪ ಅವರಿಂದ ದಾಸೋಹ ಸೇವೆ ಕೈಗೊಳ್ಳಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಿತ್ರಿಕಿ ಸುಮಂಗಲಮ್ಮ, ಲತಾ ಸೋಮಶೇಖರ್, ಆಶಾ ಬಂಡೆಮೇಗಳ, ನಿರ್ಮಲಾ ಗೋನಾಳ್, ಕಲ್ಪನಾ ಗುಡೆಕೋಟೆ, ನಾಗರಾಜ ಗುಡೆಕೋಟೆ, ಎಚ್.ಎಂ. ಚರಂತಯ್ಯ, ಹಗರಿ ಬಸವರಾಜಪ್ಪ, ಚಂದ್ರಶೇಖರ್, ಮಲ್ಲಿಕಾರ್ಜುನ, ಜಗದೀಶ್ ಬಸಾಪುರ ಭಾಗವಹಿಸಿದ್ದರು.

Share this article