ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಂಜಿನಿಯರ್‌ಗಳು ಗೌರವ ಉಳಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಡಿಕೇರಿಭೂಮಿಪೂಜೆ ಮಾಡಿದ ನಂತರ ತಕ್ಷಣ ಕಾಮಗಾರಿ ಆರಂಭಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಂಜಿನಿಯರ್‌ಗಳು ಗೌರವ ಉಳಿಸಿಕೊಳ್ಳಬೇಕು. ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಬೇಡ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಭಾಗಮಂಡಲದ ಮೇಲು ಸೇತುವೆಯ ಕೆಳಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಗೌರವ ಸಿಗುತ್ತದೆ, ಇಲ್ಲದಿದ್ದಲ್ಲಿ ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು, ಇರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು. ಈಗಾಗಲೇ ಕಾಟಕೇರಿಯಲ್ಲಿ 1 ಮತ್ತು ಪೆರಾಜೆಯಲ್ಲಿ ಎರಡು ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಎಂಜಿನಿಯರ್‌ನನ್ನು ಅಮಾನತು ಮಾಡಲು ಮುಂದಾಗಿದ್ದೆ. ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಭಾಗಮಂಡಲ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ನೂತನ ಮೇಲು ಸೇತುವೆ ಕಾಮಗಾರಿ ಮತ್ತು ತ್ರಿವೇಣಿ ಸಂಗಮದ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ಅವರು, ಕುಡಿಯುವ ನೀರಿವ ಪೂರೈಕೆ, ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛತೆ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದರು.
ಆಟೋ ಚಾಲಕರು ಮಾಲೀಕರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಭಾಗಮಂಡಲ ಶ್ರೀ ಭಗಂಡೇಶ್ವರ ತೋಟಗಾರಿಕಾ ಸಂಘಕ್ಕೆ ಭೇಟಿ ನೀಡಿದರು.
ಭಾಗಮಂಡಲ ತಲಕಾವೇರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ, ಪಂಚಾಯಿತಿ ಆಡಳಿತ ಮಂಡಳಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.