ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಕೆಲಸ: ಪದ್ಮರಾಜ್‌

KannadaprabhaNewsNetwork |  
Published : Apr 16, 2024, 01:06 AM IST
ಸುರತ್ಕಲ್‌ ಪ್ರದೇಶದಲ್ಲಿ ರೋಡ್‌ಶೋ ನಡೆಸುತ್ತಿರುವ ಪದ್ಮರಾಜ್‌ ಪೂಜಾರಿ. | Kannada Prabha

ಸಾರಾಂಶ

ಪದ್ಮರಾಜ್‌ ಪೂಜಾರಿ ಅವರು ಸೋಮವಾರ ಸುರತ್ಕಲ್, ಮುಕ್ಕ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಪ್ರದೇಶಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತನಗೆ ರಾಜಕೀಯವಾಗಿ ಸಿಕ್ಕಿದ ಅವಕಾಶವನ್ನು ಹಿಂದುಳಿದ ವರ್ಗಗಳ ಸಾಮಾಜಿಕ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.ಮಂಗಳೂರು ಹೊರವಲಯದ ಪಣಂಬೂರು ಸುಂದರಿ ಲಕ್ಷ್ಮಣ್ ಬಂಗೇರ ಸಭಾಂಗಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜಕೀಯದ ಕನಸು ಕಂಡವನು ನಾನಲ್ಲ. ಆದರೆ ಎಲ್ಲರ ಒತ್ತಾಸೆಯ ಮೇರೆಗೆ ರಾಜಕೀಯಕ್ಕೆ ಬರುವಂತಾಯಿತು. ನಾರಾಯಣ ಗುರುಗಳ ಆದರ್ಶವನ್ನೇ ಮೂಲವಾಗಿಟ್ಟುಕೊಂಡು ಸಾಮಾಜಿಕ ಕಾರ್ಯಗಳಿಗೆ ಮುಂದಾದೆ. ಇಂದು ರಾಜಕೀಯದ ಅವಕಾಶ ದೊರೆತಿದೆ. ಈ ಅವಕಾಶವನ್ನು ಸಮಾಜದ ಹಿಂದುಳಿದ ವರ್ಗದ, ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ತಿಳಿಸಿದರು.

ಮುಂದಿನ ದಿನ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿಯೊಂದು ಸಮುದಾಯದವರ ಸಭೆ ಕರೆದು, ಅಹವಾಲು ಸ್ವೀಕರಿಸುವ ಕೆಲಸ ಮಾಡಲಾಗುವುದು. ಜತೆಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ಸೇವೆ ಸಿಗಬೇಕು ಎಂಬ ಆಲೋಚನೆ ನನ್ನದು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ಪದ್ಮರಾಜ್‌ ಹೇಳಿದರು.

ಸುರತ್ಕಲ್‌, ಕೂಳೂರಲ್ಲಿ ಪ್ರಚಾರ:

ಪದ್ಮರಾಜ್‌ ಪೂಜಾರಿ ಅವರು ಸೋಮವಾರ ಸುರತ್ಕಲ್, ಮುಕ್ಕ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಪ್ರದೇಶಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಗಮನ ಸೆಳೆದರು.

ನಡು ನಡುವೆ ತೆರೆದ ವಾಹನದಿಂದ ಇಳಿದು ನೇರವಾಗಿ ಮತದಾರರ ಬಳಿಗೆ ತೆರಳಿ ಮಾತನಾಡಿಸಿದರು. ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು, ಯುವಕರನ್ನು ಮಾತನಾಡಿಸುತ್ತಾ ಸಾಗಿದರು. ಯುವಕ- ಯುವತಿಯರು ಪದ್ಮರಾಜ್‌ ಅವರ ಕೈಕುಲುಕಿ, ಸೆಲ್ಫಿ ತೆಗೆದು ಶುಭಹಾರೈಸಿದರು. ಹೆಚ್ಚಿನ ಪ್ರದೇಶಗಳಲ್ಲಿ ಅಭ್ಯರ್ಥಿಗೆ ಹೂ ಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮ ನೆರವೇರಿತು.

ಧಾರ್ಮಿಕ ಕ್ಷೇತ್ರಗಳ ಭೇಟಿ:

ಪ್ರಚಾರದ ನಡುವೆ ಪದ್ಮರಾಜ್‌ ಪೂಜಾರಿ ಅವರು ಮುಕ್ಕ ಶ್ರೀ ರಾಮ ಮಂದಿರ, ಪಡ್ರೆ ಶ್ರೀ ಧೂಮಾವತಿ ಬಂಟರ ದೈವಸ್ಥಾನ ಭಂಡಾರ ಮನೆ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ, ಕಾಟಿಪಳ್ಳ ಶ್ರೀ ಮಹಾಗಣಪತಿ ದೇವಸ್ಥಾನ, ಚಿತ್ರಾಪುರ ಶ್ರೀ ಮಹಾವಿಷ್ಣು ಭಜನಾ ಮಂದಿರ, ಕುಂಜತ್ತಬೈಲ್ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಸದ್ಭಾವನಾ ಸಮಿತಿ, ಮುಕ್ಕ ಜುಮ್ಮಾ ಮಸೀದಿ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಪ್ರತಿಭಾ ಕುಳಾಯಿ, ಪಡ್ರೆ ಶ್ರೀ ಧೂಮಾವತಿ ಬಂಟರ ದೈವಸ್ಥಾನ ಭಂಡಾರ ಮನೆಯ ಗುರಿಕಾರ ದೇವೇಂದ್ರ ಪೂಜಾರಿ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿರಾಜ್ ಸುವರ್ಣ, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ ಪಿ. ದೇವೇಂದ್ರ, ಕೇಶವ ಕಾಂಚನ, ಅಮರನಾಥ ಗುರಿಕ್ಕಾರ, ಮುಕ್ಕ ಜುಮ್ಮಾ ಮಸೀದಿಯ ರಝಾಕ್, ಎಂ.ಸಿ. ಉಮ್ಮರ್ ಫಾರೂಕ್ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ