ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯಕ್ಕೆ ಶ್ರಮಿಸಿ

KannadaprabhaNewsNetwork |  
Published : Jan 02, 2026, 03:30 AM IST
01kpl01 ಹಾಲವರ್ತಿ ಗ್ರಾಮ ಪಂಚಾಯತಿ ಆವರಣದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಹಾಲವರ್ತಿ ಗ್ರಾಮ ಪಂಚಾಯತ್ ಹಾಲವರ್ತಿ ಸಹಯೋಗದಲ್ಲಿ ಗುರುವಾರ ನಡೆದ 2026-27ನೇ ಸಾಲಿನ ಗ್ರಾಮ ಪಂಚಾಯತಿ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆ | Kannada Prabha

ಸಾರಾಂಶ

ಗ್ರಾಮ ಸಭೆ ಆಯೋಜಿಸಿ 2026-27ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಅಭಿವೃದ್ಧಿ ಯೋಜನೆ ರೂಪಿಸುವಾಗ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು.

ಕೊಪ್ಪಳ: ಮಹಾತ್ಮ ಗಾಂಧೀಜಿ ಕಂಡ ಕನಸಿನ ಗ್ರಾಮ ಸ್ವರಾಜ್ಯ ಮಾಡಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.

ತಾಲೂಕಿನ ಹಾಲವರ್ತಿ ಗ್ರಾಪಂ ಆವರಣದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಪಂ,ತಾಪಂ ಹಾಗೂ ಹಾಲವರ್ತಿ ಗ್ರಾಪಂ ಹಾಲವರ್ತಿ ಸಹಯೋಗದಲ್ಲಿ ಗುರುವಾರ ನಡೆದ 2026-27ನೇ ಸಾಲಿನ ಗ್ರಾಪಂ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಸಭೆ ಆಯೋಜಿಸಿ 2026-27ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಅಭಿವೃದ್ಧಿ ಯೋಜನೆ ರೂಪಿಸುವಾಗ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು. ಕಾಲಕಾಲಕ್ಕೆ ಗ್ರಾಮ ಸಭೆ ನಡೆಸುವ ಮೂಲಕ ಜನರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ನೀಡಬೇಕು. ನಮ್ಮ ಸಹಭಾಗಿತ್ವದಲ್ಲಿ ಎಂಬ ನಂಬಿಕೆ ಜನರಲ್ಲಿ ಮೂಡಿಸಿದಾಗ ಅಧಿಕಾರ ಯೋಜನೆಗಳ ವಿಕೇಂದ್ರೀಕರಣವಾಗಲು ಸಾಧ್ಯವಾಗುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆ ಸ್ವರೂಪ ಕಾಣಲು ಸಾಧ್ಯವಾಗುತ್ತದೆ. ಹೀಗಾಗಿ ಜನರ ಸಹಭಾಗಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಎಲ್ಲ ಗ್ರಾಮೀಣ ಕುಟುಂಬಕ್ಕೆ ಸಂಪನ್ಮೂಲ ಜೋಡಿಸುವ ಕೆಲಸವಾಗಬೇಕು. ಇದಕ್ಕಾಗಿ ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಅವುಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ಗ್ರಾಪಂಗಳು ಗ್ರಾಮ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಹಾತ್ಮ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ಮತ್ತು ಗ್ರಾಮ ಸರ್ಕಾರ ಮಾಡಲು ನಾವೆಲ್ಲರೂ ಬದ್ಧರಾಗೋಣ. ಮನುಷ್ಯ ಯಾರು ಸಹ ಪರಿಪೂರ್ಣನಾಗಿರುವುದಿಲ್ಲ. ಅವನಲ್ಲಿ ಒಂದಲ್ಲ ಒಂದು ದೋಷಗಳಿರುತ್ತವೆ. ಅವುಗಳನ್ನು ಪ್ರತಿವರ್ಷ ಕಡಿಮೆ ಮಾಡಬೇಕು ಮತ್ತು ಒಳ್ಳೆಯ ಗುಣ ಹೆಚ್ಚಿಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ನಾವೆಲ್ಲರೂ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಎಲ್ಲರೂ ಶ್ರಮದಾನ ಮಾಡಬೇಕು. ಮದ್ಯ ನಿಷೇಧಕ್ಕೂ ಎಲ್ಲರೂ ಕೈಜೋಡಿಸಬೇಕು. ಕೃಷಿಯಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯತೆಯಿದೆ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಹಾಲವರ್ತಿ ಗ್ರಾಪಂಗೆ ಒಳಪಡುವ ಎಲ್ಲ ಗ್ರಾಮಸ್ಥರು ಸಿಎಂ ಸಿದ್ರಾಮಯ್ಯ ಮತ್ತು ಎಚ್.ಕೆ. ಪಾಟೀಲರನ್ನು ನೆನೆಸುತ್ತಾರೆ. ಅವರೆ ಈ ಊರಿನ ಗ್ರಾಪಂ ಮಾಡಿ ಕೊಟ್ಟವರು. ಗ್ರಾಪಂ ಆದ ನಂತರ ಹೆಚ್ಚಿನ ಅನುದಾನ ಬರುವುದರ ಜತೆಗೆ ಇಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಗಾಂಧೀಜಿಯವರ ದೂರದೃಷ್ಟಿ ಅವರ ವಿಚಾರಗಳನ್ನು ನಾವು ಇತಿಹಾಸದಲ್ಲಿ ಕೇಳಿದ್ದೇವೆ. ಅವರ ಗ್ರಾಮ ಸ್ವರಾಜ್ಯದ ಕಲ್ಪನೆ ಗ್ರಾಮಗಳ ಉದ್ಧಾರವಾಗಿದೆ ಎಂದರು.

ಹಾಲವರ್ತಿಯಲ್ಲಿ ₹22 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಡಿಗಲ್ಲು ಹಾಕಿದ್ದೇವೆ. ನಮ್ಮ ಭಾಗದಲ್ಲಿ ಹಿಟ್ನಾಳ, ಕಿಡದಾಳ, ಹಾಲವರ್ತಿ ಸೇರಿದಂತೆ 4 ಕಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾಡಿಸಿದ್ದೇವೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರನ್ನೆ ಆಸ್ತಿಯನ್ನಾಗಿ ಮಾಡಬೇಕು. ಸಮ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇದನ್ನು ದೇಶದ ಇತರೆ ಯಾವುದೇ ರಾಜ್ಯಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ಭವನದ ಅಧ್ಯಕ್ಷ ನಾಡೋಜ ಉಡೇ ಪಿ. ಕೃಷ್ಣ,ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಸಿಇಓ ವರ್ಣಿತ್ ನೇಗಿ, ಜಿಪಂ ಮಾಜಿ ಸದಸ್ಯ ಗೂಳೆಪ್ಪ ಹಲಗೇರಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಶಿವರಾಜ, ಹಾಲವರ್ತಿ ಗ್ರಾಪಂ ಅಧ್ಯಕ್ಷೆ ಜಯಪ್ರದಾ ಗೊರವರ, ಉಪಾಧ್ಯಕ್ಷ ಮಹೇಂದ್ರ, ಸದಸ್ಯರಾದ ನಾಗರಾಜ, ಜ್ಞಾನಪ್ಪ ತಳಕಲ್, ಕೆ. ಸತೀಶ್, ಮಹಾಂತೇಶ ಹಾನಗಲ್ ಹಾಗೂ ಹನುಮಂತಪ್ಪ ಕಿಡದಾಳ, ಇಬ್ರಾಹಿಂ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು