ವಯನಾಡಲ್ಲಿ ಪ್ರಿಯಾಂಕ ಗೆಲುವಿಗೆ ಶ್ರಮಿಸಿ: ಡಾ.ಪ್ರಭಾ

KannadaprabhaNewsNetwork | Published : Oct 28, 2024 1:03 AM

ಸಾರಾಂಶ

ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿದ್ದು, ಇಲ್ಲಿನ ಕೇರಳಿಗರು ಅಲ್ಲಿನ ತಮ್ಮ ಬಂಧು, ಬಳಗ, ಸ್ನೇಹಿತರಿಗೆ ಹೇಳಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ದಾವಣಗೆರೆಯಲ್ಲಿ ಮಾಡಿದ್ದಾರೆ.

- ಕೇರಳ ಸಮಾಜಂ ನೇತೃತ್ವದಲ್ಲಿ ಓಣಂ ಹಬ್ಬ, ಅಭಯಹಸ್ತ ಚಾರಿಟಿ ಟ್ರಸ್ಟ್‌ ಉದ್ಘಾಟನೆ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿದ್ದು, ಇಲ್ಲಿನ ಕೇರಳಿಗರು ಅಲ್ಲಿನ ತಮ್ಮ ಬಂಧು, ಬಳಗ, ಸ್ನೇಹಿತರಿಗೆ ಹೇಳಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕೇರಳ ಸಮಾಜಂ ಹಮ್ಮಿಕೊಂಡಿದ್ದ ಓಣಂ ಹಬ್ಬ ಹಾಗೂ ಅಭಯಹಸ್ತ ಚಾರಿಟಿ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಸದರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ವೇತನವನ್ನು ಕೇರಳದ ವಯನಾಡು ಸಂತ್ರಸ್ತರಿಗೆ ನೀಡಿದ್ದೆ ಎಂದರು.

ಭೂ ಕುಸಿತದಿಂದ ತತ್ತರಿಸಿದ್ದ ವಯನಾಡು ಪ್ರದೇಶದಲ್ಲಿ ಸಂತ್ರಸ್ತರ ನೆರವಿಗಾಗಿ ಎಸ್‌.ಎಸ್‌. ಕೇರ್ ಟ್ರಸ್ಟ್‌ನಿಂದ ಔಷಧಿ, ಮಾತ್ರೆ, ಹಾಸಿಗೆ, ಹೊದಿಗೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸಹ ಕಳಿಸಿಕೊಟ್ಟಿದ್ದೆವು. ಅಲ್ಲಿಗೆ ತಮ್ಮ ಸಂಸ್ಥೆಯ ನುರಿತ ವೈದ್ಯರು, ಯುವ ವೈದ್ಯರು ತೆರಳಿ, ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ, ಜಾಗೃತಿ ಕಾರ್ಯಗಳನ್ನು ಸಹ ಕೈಗೊಂಡಿದ್ದರು ಎಂದರು.

ಸದ್ಯ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅಲ್ಲಿ ಈಗ ಪ್ರಿಯಾಂಕ ಗಾಂಧಿ ಸ್ಪರ್ಧೆ ಇಡೀ ದೇಶದ ಗಮನ ಸೆಳೆಯುುತ್ತಿದೆ. ಪ್ರಿಯಾಂಕಾ ಗೆಲ್ಲಲ್ಲಿದ್ದು, ಹೆಚ್ಚು ಮತಗಳ ಅಂತರದ ಗೆಲುವು ಅಲ್ಲಿ ಆಗಬೇಕು ಎಂದು ಡಾ.ಪ್ರಭಾ ಮನವಿ ಮಾಡಿದರು.

ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸಂಸದರ ನಿವಾಸಗಳಿಗೂ ತೆರಳಿ, ಕೇರಳ ರಾಜ್ಯದ ಸಾಂಪ್ರಾದಾಯಿಕ ಸಸ್ಯಹಾರವನ್ನು ನಮಗೆ ಮಾಡಿ, ನೀಡುವ ಮೂಲಕ ಆತಿಥ್ಯ ನೀಡಿದ್ದಾರೆ. ದೇವರನಾಡು ಅಂತಲೇ ಕೇರಳ ಪ್ರಸಿದ್ಧವಾಗಿದೆ. ಅದು ದೇವರ ನಾಡೆಂಬ ಹೆಸರಾಗಿದ್ದು, ನೀವು ಸಹ ದೇವರ ಮಕ್ಕಳು. ಜಾತ್ಯತೀತವಾಗಿ ಇಲ್ಲಿ ಓಣಂ ಹಬ್ಬ ಆಚರಿಸುವ ಮೂಲಕ ಮಾದರಿ ಆಚರಣೆ ಇಲ್ಲಿ ಆಗುತ್ತಿದೆ. ಅಭಯಹಸ್ತ ಸಂಸ್ಥೆ ಸ್ಥಾಪನೆ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಮಾದರಿ ಕೆಲಸಗಳಾಗಿವೆ ಎಂದು ಸಂಸದೆ ಶ್ಲಾಘಿಸಿದರು.

ಕೇರಳ ಸಮಾಜಂ ಮಹಿಳಾ ಅಧ್ಯಕ್ಷೆ ಬಿ.ಪ್ರಸನ್ನ ಮಾತನಾಡಿ, ಹಿರಿಯರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ನೂತನ ಸಂಸದರಾಗಿ ಆಯ್ಕೆಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಸದಾ ಕೇರಳದಿಂದ ಬಂದ ನಮ್ಮ ಜನರಿಗೆ ಸ್ಪಂದಿಸುತ್ತಿದ್ದಾರೆ. ಸರ್ಕಾರದಿಂದ ನಿವೇಶನ ಒದಗಿಸುವ ಜೊತೆಗೆ ಭವನ ನಿರ್ಮಿಸಲು ಕೇರಳ ಸಮಾಜಂಗೆ ₹5 ಲಕ್ಷ ನೀಡುವ ಮೂಲಕ ಶಾಮನೂರು ಶಿವಶಂಕರಪ್ಪ ಅವರು ಸ್ಪಂದಿಸಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದರು.

ಮುಸ್ಲಿಂ ಧರ್ಮಗುರು ಇಬ್ರಾಹಿಂ ಸಖಾಫಿ, ಡಾ.ಅರವಿಂದ, ಫಾದರ್‌, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಸಮಾಜಂ ಅಧ್ಯಕ್ಷ ಪವಿತ್ರನ್, ರೆಹಮಾನ್‌, ಮಣಿಕುಟ್ಟನ್‌, ಅನೀಶ್‌, ಸಾಮಿ ಇಂದ್ರಜಿತ್‌, ರೋಶನಿ ವಿನೋದಕುಮಾರ, ಸಿಮ್ಮಿ, ಜಯಂತ್‌, ನವೀನ್‌, ಮಲಬಾರ್‌ ವಿನೋದಕುಮಾರ, ರತೀಶ ಇತರರು ಇದ್ದರು. ಸಮಾಜ ಬಾಂಧವರಿಂದ ಓಣಂ ಹಬ್ಬದ ಕಾರ್ಯಕ್ರಮಗಳು ನಡೆದವು.

- - -

ಬಾಕ್ಸ್‌

* ಕೇರಳ ಭವನಕ್ಕೆ ₹5 ಲಕ್ಷ: ಎಸ್‌ಎಸ್ ಭರವಸೆ

ಸಮಾರಂಭ ಉದ್ಘಾಟಿಸಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, 1963ರಲ್ಲಿ ಏಳೆಂಟು ಹಿರಿಯರು ಸೇರಿ, ಇಲ್ಲಿ ಕೇರಳ ಸಮಾಜಂ ಸ್ಥಾಪಿಸಿ, ಕೇರಳಿಗರನ್ನೆಲ್ಲಾ ಒಂದು ಕಡೆ ಸೇರುವಂತೆ ಮಾಡಿದ್ದಾರೆ. ಇಲ್ಲಿಯೇ ವ್ಯಾಪಾರ, ವ್ಯವಹಾರ, ಉದ್ಯಮ ಮಾಡಿಕೊಂಡು, ಆಗಿನಿಂದಲೂ ಬದುಕು ಕಟ್ಟಿಕೊಂಡಿದ್ದೀರಿ. ಕೇರಳಿಗರು ತಮಗೆ, ತಮ್ಮ ಪಕ್ಷಕ್ಕೆ ಬೆಂಬಲಿಸಿಕೊಂಡೇ ಬಂದಿದ್ದೀರಿ. ನೀವು ಸದಾ ನಮ್ಮೊಂದಿಗೆ ಇರಿ, ನಾವೂ ನಿಮ್ಮೊಂದಿಗೆ ಇರುತ್ತೇವೆ. ಈ ಹಿಂದೆ ಕೇರಳ ಸಮಾಜಂಗೆ ಸಿಎ ನಿವೇಶನ ನೀಡಿದ್ದು, ಅಲ್ಲಿ ಕೇರಳ ಭವನ ನಿರ್ಮಿಸಲು ₹5 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.

- - - -27ಕೆಡಿವಿಜಿ5:

ದಾವಣಗೆರೆಯಲ್ಲಿ ಭಾನುವಾರ ಕೇರಳ ಸಮಾಜಂ ಹಮ್ಮಿಕೊಂಡಿದ್ದ ಓಣಂ ಹಬ್ಬ ಕಾರ್ಯಕ್ರಮವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮುಸ್ಲಿಂ ಧರ್ಮಗುರು ಇಬ್ರಾಹಿಂ ಸಖಾಫಿ, ಡಾ.ಅರವಿಂದ್, ದಿನೇಶ ಕೆ. ಶೆಟ್ಟಿ ಇತರರು ಇದ್ದರು.

Share this article