ಗದಗ: ಜಿಲ್ಲೆಯಲ್ಲಿ ನ. 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಸಂಭ್ರಮದಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವದ ದಿನದ ಹಿಂದಿನ ದಿನ ಹಾಗೂ ಕನ್ನಡ ರಾಜ್ಯೋತ್ಸವದ ದಿನ ಎರಡು ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆಯೊಂದಿಗೆ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಅಂದು ಬೆಳಗ್ಗೆ 7.30ಕ್ಕೆ ಗದಗ ಬೆಟಗೇರಿ ನಗರಸಭೆ ಪದವಿ ಪೂರ್ವ ಕಾಲೇಜ ಆವರಣದಿಂದ ತಾಯಿ ಭುವನೇಶ್ವರಿಯ ಮೆರವಣಿಗೆಯು ವಿವಿಧ ವೃತ್ತಗಳಲ್ಲಿ ಸಂಚರಿಸಿ, ಆನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಲಿದೆ. ಬೆಳಗ್ಗೆ 9ಕ್ಕೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸಾರ್ವಜನಿಕ ಧ್ವಜಾರೋಹಣ ನೆರವೇರಿಸುವರು. ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಪೊಲೀಸ್ ಪಡೆ, ಹೋಂಗಾರ್ಡ್, ಭಾರತ ಸೇವಾ ದಳಗಳಿಂದ ಪರೇಡ್, ಪಥ ಸಂಚಲನ ಜರುಗಲಿವೆ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಂತೆ ಕ್ರಮ ವಹಿಸಬೇಕು. ಶಿಷ್ಟಾಚಾರದನ್ವಯ ಆಸನದ ವ್ಯವಸ್ಥೆಗೆ ಕ್ರಮ ವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಯವರು ಈ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಹಾಗೂ ಅತಿಥಿಗಳಿಗೆ ಆಸನದ ವ್ಯವಸ್ಥೆ , ಅಲ್ಪೋಪಾಹಾರದ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು. ಶಿಷ್ಟಾಚಾರದನ್ವಯ ಅತಿಥಿ ಗಣ್ಯರ ಅಹ್ವಾನ ಹಾಗೂ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಣತರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.