ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ದೌರ್ಜನ್ಯ ಪ್ರಕರಣ ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ದೌರ್ಜನ್ಯ ಪ್ರಕರಣಗಳ ತಾಲೂಕು ನಿಯಂತ್ರಣ ಸಮಿತಿ ಜಿಲ್ಲೆಯ ಆಯಾ ತಾಲೂಕಿನ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಇದರಲ್ಲಿ ಇರುವ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವುದರ ಜತೆಗೆ ಪ್ರತಿ ಬುಧವಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಲಾದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಗ್ರಾಮಗಳಲ್ಲಿ ಸಭೆ ನಡೆಸುವ ಮೂಲಕ ವಿವಿಧ ಸಮುದಾಯಗಳಲ್ಲಿ ಸೌಹಾರ್ದತೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯ ಯಾವುದೇ ಸ್ಥಳದಲ್ಲಿ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಅಸ್ಪೃಶ್ಯತೆ ಆಚರಣೆಯಂತಹ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ ಈ ಕುರಿತು ತಕ್ಷಣ ಕ್ರಮವಹಿಸಬೇಕು. ಜಿಲ್ಲೆಯ ಯಾವುದೇ ಸಮಸ್ಯೆಗಳು ನಮಗಿಂತ ಮೊದಲು ಆಯಾ ತಾಲೂಕಿನ ಸಮಸ್ಯೆಗಳು ತಮಗೆ ಮೊದಲು ತಿಳಿಯುತ್ತವೆ. ಹಾಗಾಗಿ ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದರು.ಪ್ರತಿ ಬುಧವಾರ ಈಗಾಗಲೇ ಗುರುತಿಸಿರುವ ಸೆನ್ಸಿಟಿವ್ ಹಳ್ಳಿಗಳಲ್ಲಿ ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಒಳಗೊಂಡ ಸಮಿತಿ ಸಭೆ ಪ್ರತಿವಾರ ಸಭೆ ನಡೆಸಿದ ಮಾಹಿತಿ ನೀಡಬೇಕು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲೆ ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.