ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೂ ಬಿಜೆಪಿಗರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನನ್ನ ಕೆಲಸಗಳೇ ಅದಕ್ಕೆ ಉತ್ತರ ನೀಡಲಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಮುಂದಿನ ತಿಂಗಳು ಯೋಜನೆ ಉದ್ಘಾಟಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡುತ್ತೇನೆ ಎಂದರು.
ಮುಕುಂದ್ ಕಾರ್ಖಾನೆ ವಿಸ್ತರಣೆಗೆ ವಿರೋಧ: ಮುಕುಂದ್ ಕಾರ್ಖಾನೆ ವಿಸ್ತರಣೆ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಪರಿಸರ ಆಲಿಕೆ ಸಭೆಗೂ ತಮ್ಮನ್ನು ಆಹ್ವಾನಿಸಿಲ್ಲ. ಹೀಗಿರುವಾಗ ಸಭೆಗೆ ಹೇಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಕಾರ್ಖಾನೆ ವಿಸ್ತರಣೆಯಾಗಬಾರದು. ವಿಸ್ತರಣೆಯನ್ನು ತಾವು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.ಕಾರ್ಖಾನೆ ವಿಸ್ತರಣೆಗೆ ರಾಜ್ಯ ಸರ್ಕಾರವೊಂದೇ ಹೊಣೆಯಲ್ಲ. ಕೇಂದ್ರ ಸರ್ಕಾರವೂ ಎನ್‌ಒಸಿ ನೀಡಬೇಕಾಗುತ್ತದೆ. ಈ ಅಂಶ ಅರ್ಥಮಾಡಿಕೊಳ್ಳದೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.
ನಗರ ಅಭಿವೃದ್ಧಿ ಕಾಮಗಾರಿ: ಕೊಪ್ಪಳ ನಗರದಲ್ಲಿ ಬೀದಿ ದೀಪ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಲ್ಲ ಕಡೆ ದೀಪಗಳನ್ನು ಅಳವಡಿಸಲಾಗುವುದು. ಅಶೋಕ ವೃತ್ತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಕಾಮಗಾರಿ ಕಳಪೆಯಾಗಿಲ್ಲ. ವೃತ್ತಕ್ಕೆ ಹಾನಿಯಾಗಿರುವುದನ್ನು ಸರಿಪಡಿಸಲಾಗುವುದು ಎಂದರು.