ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ: ಶಾಸಕ ನಿಖಿಲ ಕತ್ತಿ

KannadaprabhaNewsNetwork |  
Published : Feb 04, 2025, 12:31 AM IST
ಹುಕ್ಕೇರಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಅವರು ಪೊಲೀಸರ ವಿರುದ್ಧ ಹರಿಹಾಯ್ದರು. | Kannada Prabha

ಸಾರಾಂಶ

ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದು ಅಪರಾಧಿಗಳೊಂದಿಗೆ ಕೈಜೋಡಿಸಿರುವ ಅನುಮಾನವಿದೆ ಎಂದು ಶಾಸಕ ನಿಖಿಲ್ ಕತ್ತಿ ತೀವ್ರ ಅಸಮಾಧಾನ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿರುವ ಅನುಮಾನವಿದೆ ಎಂದು ಶಾಸಕ ನಿಖಿಲ್ ಕತ್ತಿ ತೀವ್ರ ಅಸಮಾಧಾನ ಹೊರಹಾಕಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಕಳ್ಳತನ, ರೈತರ ವಿದ್ಯುತ್ ಮೋಟಾರ್ ಕಳ್ಳತನ ಸೇರಿದಂತೆ ಅನೇಕ ಅಪರಾಧ ಕೃತ್ಯಗಳು ನಡೆಯುತ್ತಿವೆ. ಆದರೆ, ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಗಾಂವ ಗ್ರಾಮದ ಸಾರ್ವಜನಿಕರು ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದರೂ ಹುಕ್ಕೇರಿ ಠಾಣೆಯ ನಾಯಿಕ ಎನ್ನುವ ಪೇದೆ ಬಿಟ್ಟು ಬಿಟ್ಟಿದ್ದಾರೆ. ಭಂಡಾರಿ ಎನ್ನುವ ಪೇದೆ ದಿನವಿಡೀ ಮದ್ಯಸೇವಿಸಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ನಾಯಿಕ ಮತ್ತು ಭಂಡಾರಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು. ಜನರ ದೂರು ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ. ಪೊಲೀಸರು ಇದೇ ರೀತಿ ಪ್ರವೃತ್ತಿ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳಲು ಎಸ್ಪಿಗೆ ದೂರು ನೀಡಲಾಗುವುದು ಎಂದು ಶಾಸಕ ಕತ್ತಿ ಖಡಕ್ ಎಚ್ಚರಿಕೆ ನೀಡಿದರು.

ಹುಕ್ಕೇರಿ ಮತ್ತು ಸಂಕೇಶ್ವರ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಿಗಳಿಗೆ ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ. ಸಾರ್ವಜನಿಕರು ನೆಮ್ಮದಿಯಿಂದ ಇರಲು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರ ವಿರುದ್ಧ ಹರಿಹಾಯ್ದ ಅವರು, ಇದಕ್ಕೆಲ್ಲಾ ಪೊಲೀಸರೇ ನೇರ ಹೊಣೆಗಾರರು ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಬರುವ ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸರ್ಕಾರಿ ಗಾಯರಾಣ, ಗಾವಠಾಣಗಳನ್ನು ಸರ್ವೆ ಮಾಡಿ ಸ್ಮಶಾನಗಳಿಗೆ ಕಾಯ್ದಿರಿಸಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಾವುದೇ ಅನುದಾನ ವಾಪಸ್ ಹೋಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ತಹಶೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ